ಬೆಂಗಳೂರು.ಸೆಪ್ಟೆಂಬರ್.02: ಕರ್ನಾಟಕ ಸರ್ಕಾರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2026–27ನೇ ಸಾಲಿನ ವಿವಿಧ ಕಲ್ಯಾಣ ಹಾಗೂ ಆರ್ಥಿಕ ಸೌಲಭ್ಯ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಸೆಪ್ಟೆಂಬರ್ 30, 2026 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:

ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಹಾಗೂ ಸೇವಾ ವಲಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ₹2 ಲಕ್ಷದವರೆಗೆ ಆರ್ಥಿಕ ನೆರವು ಸಿಗಲಿದೆ. ಇದರಲ್ಲಿ ₹20,000 ದಿಂದ ₹30,000 ದವರೆಗೆ ಸಹಾಯಧನ ಹಾಗೂ ಉಳಿದ ಮೊತ್ತಕ್ಕೆ ವಾರ್ಷಿಕ ಶೇ. 4 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. (ವಯೋಮಿತಿ: 18 ರಿಂದ 55 ವರ್ಷ).

ಗಂಗಾ ಕಲ್ಯಾಣ ನೀರಾವರಿ ಯೋಜನೆ:
ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ₹4.75 ಲಕ್ಷ ಘಟಕ ವೆಚ್ಚ ಹಾಗೂ ಉಳಿದ ಜಿಲ್ಲೆಗಳಿಗೆ ₹3.75 ಲಕ್ಷ ನಿಗದಿಪಡಿಸಲಾಗಿದೆ. ಕರಾವಳಿ/ಮಲೆನಾಡು ಭಾಗಗಳಲ್ಲಿ ಕನಿಷ್ಠ 1 ಎಕರೆ ಹಾಗೂ ಇತರೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಕನಿಷ್ಠ 2 ರಿಂದ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
ಅರಿವು ಶೈಕ್ಷಣಿಕ ಸಾಲ ಯೋಜನೆ:
ಸಿಇಟಿ ಅಥವಾ ನೀಟ್ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ ₹1 ಲಕ್ಷದಂತೆ ಗರಿಷ್ಠ ₹4 ರಿಂದ ₹5 ಲಕ್ಷದವರೆಗೆ ಶೇ. 2 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಕುಟುಂಬದ ವಾರ್ಷಿಕ ಆದಾಯ ಮಿತಿ ₹3.50 ಲಕ್ಷದೊಳಗಿರಬೇಕು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ:
ಕ್ಯೂಎಸ್ (QS) ವರ್ಲ್ಡ್ ರ‍್ಯಾಂಕಿಂಗ್‌ನ 1000 ರೊಳಗಿನ ವಿದೇಶಿ ವಿವಿಗಳಲ್ಲಿ ಪಿಎಚ್.ಡಿ, ಪೋಸ್ಟ್ ಡಾಕ್ಟರಲ್ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಶೂನ್ಯ ಬಡ್ಡಿದರದಲ್ಲಿ ವಾರ್ಷಿಕ ₹25 ಲಕ್ಷ ಹಾಗೂ ಪೂರ್ಣ ಕೋರ್ಸ್‌ಗೆ ₹50 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ:
ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರಗಳ ವಾಹನ ಖರೀದಿಸಲು ಬ್ಯಾಂಕುಗಳ ಮೂಲಕ ಪಡೆಯುವ ಸಾಲಕ್ಕೆ ಶೇ. 50 ರಷ್ಟು (ಗರಿಷ್ಠ ₹3 ಲಕ್ಷ) ಸಹಾಯಧನ ದೊರೆಯಲಿದೆ. (ವಯೋಮಿತಿ: 21 ರಿಂದ 45 ವರ್ಷ, ಲಘು ವಾಹನ ಚಾಲನಾ ಪರವಾನಗಿ ಕಡ್ಡಾಯ).
ಹೊಲಿಗೆ ಯಂತ್ರ ವಿತರಣೆ ಯೋಜನೆ:
ಬಡ ಕುಟುಂಬದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಹೊಲಿಗೆ ಯಂತ್ರ ವಿತರಣೆ ಸೌಲಭ್ಯ ಕಲ್ಪಿಸಲಾಗುವುದು. (ವಯೋಮಿತಿ: 18 ರಿಂದ 55 ವರ್ಷ).
ಅರ್ಹತೆ ಮತ್ತು ನಿಬಂಧನೆಗಳು:
ಅರ್ಜಿದಾರರು ಪ್ರವರ್ಗ-1, 2ಎ, 3ಎ ಮತ್ತು 3ಬಿ ವರ್ಗಗಳಿಗೆ ಸೇರಿದವರಾಗಿರಬೇಕು (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ/ಅರೆ ಅಲೆಮಾರಿ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ, ತಿಗಳ, ಗಾಣಿಗ, ಕುಂಬಾರ, ಹಡಪದ, ಕ್ಷೌರಿಕ ಹಾಗೂ ಈಡಿಗ ಮತ್ತಿತರ ಉಪ ಸಮುದಾಯಗಳ ನಿಗಮಗಳ ವ್ಯಾಪ್ತಿಯನ್ನು ಹೊರತುಪಡಿಸಿ).
ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ₹98,000 ಹಾಗೂ ಪಟ್ಟಣ ಪ್ರದೇಶದವರಿಗೆ ₹1,20,000 ಮಿತಿಯೊಳಗಿರಬೇಕು (ವಿದೇಶಿ ವ್ಯಾಸಂಗಕ್ಕೆ ₹15 ಲಕ್ಷ ಹಾಗೂ ‘ಅರಿವು’ ಯೋಜನೆಗೆ ₹3.50 ಲಕ್ಷ ಮಿತಿ).
ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ.
ಕುಟುಂಬದಲ್ಲಿ ಯಾರಾದರೂ ಈಗಾಗಲೇ ನಿಗಮದಿಂದ ಸೌಲಭ್ಯ ಪಡೆದಿದ್ದರೆ ಅಥವಾ 2024–25 ಮತ್ತು 2025–26ನೇ ಸಾಲಿನಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳು ಮರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ‘ಸೇವಾ ಸಿಂಧು’ ತಂತ್ರಾಂಶದಲ್ಲಿ (http://sevasindhu.karnataka.gov.in) ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ: 30-09-2026

ವೆಬ್‌ಸೈಟ್: www.dbcdc.karnataka.gov.in
ಸಹಾಯವಾಣಿ: 080-22374832 / 8050770004 / 8050770005
















