Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಹಕರೇ ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ : ದೇಶಾದ್ಯಂತ ನಾಳೆಯಿಂದ 4 ದಿನ ಬ್ಯಾಂಕ್ ಬಂದ್.!

---Advertisement---

ದೆಹಲಿ.ಸೆಪ್ಟೆಂಬರ್.10: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸೂಚನೆ. ದೇಶಾದ್ಯಂತ ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 11ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ವಾರಕ್ಕೆ 5 ದಿನಗಳ ಕೆಲಸದ ಅವಧಿ ಜಾರಿ, ಪಿಂಚಣಿ ಸಮಸ್ಯೆಗಳ ತ್ವರಿತ ಪರಿಹಾರ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬ್ಯಾಂಕ್ ಒಕ್ಕೂಟಗಳು ಶುಕ್ರವಾರ ಮುಷ್ಕರ ನಡೆಸಲು ನಿರ್ಧರಿಸಿವೆ.

ಮುಷ್ಕರದ ಬೆನ್ನಲ್ಲೇ ಎರಡನೇ ಶನಿವಾರ, ಭಾನುವಾರ ಹಾಗೂ ಗಣೇಶ ಚತುರ್ಥಿ ರಜೆಗಳು ಒಟ್ಟಿಗೆ ಬಂದಿರುವುದರಿಂದ ಬ್ಯಾಂಕಿಂಗ್ ವಹಿವಾಟುಗಳು ಸತತ ನಾಲ್ಕು ದಿನಗಳ ಕಾಲ ಸ್ಥಗಿತಗೊಳ್ಳಲಿವೆ.

ಸತತ 4 ದಿನ ಬ್ಯಾಂಕ್ ರಜೆ ವಿವರ:

ಸೆಪ್ಟೆಂಬರ್ 11 (ಶುಕ್ರವಾರ): ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ

ಸೆಪ್ಟೆಂಬರ್ 12 (ಶನಿವಾರ): ಎರಡನೇ ಶನಿವಾರದ ಸಾರ್ವತ್ರಿಕ ರಜೆ

ಸೆಪ್ಟೆಂಬರ್ 13 (ಭಾನುವಾರ): ವಾರದ ರಜೆ

ಸೆಪ್ಟೆಂಬರ್ 14 (ಸೋಮವಾರ): ಗಣೇಶ ಚತುರ್ಥಿ ಹಬ್ಬದ ರಜೆ

ಸೆಪ್ಟೆಂಬರ್ 11 ರಿಂದ 14 ರವರೆಗೆ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸದ ಕಾರಣ ನಗದು ಠೇವಣಿ, ಡ್ರಾ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಪ್ರಮುಖ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಲಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ ಸೆಪ್ಟೆಂಬರ್ 28 ರಿಂದ ಮತ್ತೆ ಮೂರು ದಿನ ಮತ್ತು ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ವಿಫಲವಾದ ಮಾತುಕತೆ

ಮುಷ್ಕರವನ್ನು ಕೈಬಿಡುವಂತೆ ಕೋರಿ ಕೇಂದ್ರ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಆರ್ಥಿಕ ಸೇವಾ ಇಲಾಖೆ, ಕಾರ್ಮಿಕ ಅಧಿಕಾರಿಗಳು ಹಾಗೂ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (UFBU) ನಡುವೆ ನಡೆದ ಸಂಧಾನ ಮಾತುಕತೆ ವಿಫಲವಾಗಿದೆ. ವಾರಕ್ಕೆ 5 ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಬ್ಯಾಂಕ್ ಯೂನಿಯನ್‌ಗಳು ಕಟ್ಟುನಿಟ್ಟಾಗಿ ತಿಳಿಸಿವೆ. ಹೀಗಾಗಿ ಮುಂಚಿತವಾಗಿ ನಿಗದಿಯಾದಂತೆ ಶುಕ್ರವಾರದ ಮುಷ್ಕರ ಮುಂದುವರಿಯಲಿದೆ.

Join WhatsApp

Join Now

Join Telegram

Join Now