ಬೆಂಗಳೂರು.ಜೂನ್.19: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನವಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಷಯದ ಸತ್ಯಾಸತ್ಯತೆ ಮತ್ತು ವಾಸ್ತವಿಕತೆಯನ್ನು ಪರಿಶೀಲಿಸಲು ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಪ್ರಮುಖರನ್ನೊಳಗೊಂಡ ಉನ್ನತ ಮಟ್ಟದ ತನಿಖಾ ತಂಡವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚಿಸಿದ್ದಾರೆ.
ಅಡ್ಡಮತದಾನದ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸಲು ಮೂವರು ಪ್ರಮುಖ ನಾಯಕರನ್ನು ಒಳಗೊಂಡ ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ.
ಈ ಸಮಿತಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಇದ್ದಾರೆ. ಈ ಭಿನ್ನಮತ ಅಥವಾ ಅಡ್ಡಮತದಾನದ ಪ್ರಕ್ರಿಯೆಯ ಹಿಂದೆ ಯಾರಿದ್ದಾರೆ ಮತ್ತು ನೈಜ ಪರಿಸ್ಥಿತಿ ಏನು ಎಂಬುದರ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ, ಬರುವ ಜೂನ್ 25, 2026 ರ ಒಳಗೆ ಪಕ್ಷಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.







