ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ನೀಡುವುದು ನಮ್ಮ ಸರ್ಕಾರದ ಮುಖ್ಯ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.
ಟೀಮ್ ಕರ್ನಾಟಕವಾಗಿ ಕೆಲಸ ಮಾಡಿ
ನಾವೆಲ್ಲರೂ ಒಂದೇ ತಂಡ, ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕಿದೆ. ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯಲ್ಲಿ ನಮ್ಮ ಸರ್ಕಾರ ಸಾಮಾಜಿಕ ನ್ಯಾಯವನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ” ಎಂದು ಸಿಎಂ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಲಂಚ ಮುಕ್ತ ಆಡಳಿತ: ಶೂನ್ಯ ಭ್ರಷ್ಟಾಚಾರಕ್ಕೆ ಕರೆ
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಿಎಂ ಕರೆ ನೀಡಿದ್ದಾರೆ. “ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು 10 ರೂಪಾಯಿ ಕೂಡ ಲಂಚ ನೀಡದಂತಹ ವಾತಾವರಣ ನಿರ್ಮಾಣವಾಗಬೇಕು. ಯಾರಾದರೂ ಕಾನೂನು ಬಾಹಿರ ಕೆಲಸ ಮಾಡುವಂತೆ ಒತ್ತಡ ಹೇರಿದರೆ, ತಕ್ಷಣವೇ ಆ ಬಗ್ಗೆ ನನಗೆ ನೇರವಾಗಿ ಮಾಹಿತಿ ನೀಡಿ” ಎಂದು ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದರು.
ರೌಡಿಸಂ, ಡ್ರಗ್ಸ್ ಹಾಗೂ ನಕಲಿ ಫೈನಾನ್ಸ್ಗಳಿಗೆ ಬ್ರೇಕ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಕಠಿಣ ಸೂಚನೆ ನೀಡಲಾಗಿದೆ.ಪ್ರತಿ ಪೊಲೀಸ್ ಠಾಣೆಯಲ್ಲೂ ಐದು ಪೊಲೀಸರ ವಿಶೇಷ ತಂಡವನ್ನು ರಚಿಸಿ ರೌಡಿಸಂ ಮಟ್ಟ ಹಾಕಲು ಸೂಚಿಸಲಾಗಿದೆ.ಗಾಂಜಾ, ಡ್ರಗ್ಸ್ ಜಾಲ ಹಾಗೂ ಸೈಬರ್ ಅಪರಾಧಗಳಿಗೆ ಕಠಿಣ ಕಡಿವಾಣ ಹಾಕಲಾಗುವುದು.ಸಾರ್ವಜನಿಕರನ್ನು ವಂಚಿಸುವ ನಕಲಿ ಫೈನಾನ್ಸ್ ಕಂಪನಿಗಳ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಮುಂದಿನ ಒಂದು ತಿಂಗಳ ಒಳಗಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ವಿತರಿಸಬೇಕು. ಗ್ರಾಮೀಣ ಶಾಲೆಗಳ ಅಭಿವೃದ್ಧಿಗಾಗಿ ನೂತನ ಸಿಎಸ್ಆರ್ (CSR) ನೀತಿಯನ್ನು ತರಲಾಗುತ್ತಿದೆ.
ಮಳೆ ಕೊರತೆ ಎದುರಿಸಲು ಸಜ್ಜು: ಈ ಬಾರಿ ಎಲ್ ನಿನೋ ಪ್ರಭಾವದಿಂದಾಗಿ ಶೇ. 30 ರಷ್ಟು ಮಳೆ ಕೊರತೆಯಾಗುವ ಮುನ್ಸೂಚನೆ ಇದೆ. ಬಿತ್ತನೆ ಕಾರ್ಯ ಆರಂಭವಾಗುತ್ತಿರುವುದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮತ್ತು ಮತದಾನದ ಹಕ್ಕು ರಕ್ಷಣೆ
ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಅಥವಾ ಫಲಾನುಭವಿಗಳನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಅರ್ಹರಿಗೆ ಮಾತ್ರ ಯೋಜನೆ ತಲುಪಿಸುವ ನಿಟ್ಟಿನಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಪುನಃ ಅರ್ಜಿ ಪಡೆಯಲಾಗುವುದು ಎಂದರು.
ಅಲ್ಲದೆ, ಸರ್ಕಾರದ ಐದು ಗ್ಯಾರಂಟಿ ಹಾಗೂ ಪಿಂಚಣಿ ಸೌಲಭ್ಯಗಳು ಸಿಗಬೇಕಾದರೆ ಮತದಾನದ ಹಕ್ಕು ಅತ್ಯಗತ್ಯ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಬಿಎಲ್ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ಸಲ್ಲಿಸಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ವಾಸ ಪ್ರಮಾಣ ಪತ್ರ ಇಲ್ಲದವರಿಗೆ ಶೀಘ್ರವಾಗಿ ಅದನ್ನು ವಿತರಿಸಲು ಆದೇಶಿಸಲಾಗಿದೆ.
ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಖಾಸಗಿ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ‘ಯುವ ಯುಗ’ ಆರಂಭಿಸಲಾಗುತ್ತಿದೆ. ಯುವಕರ ಪ್ರತಿಭೆ ಅನಾವರಣಗೊಳಿಸಲು ರಾಜಕೀಯೇತರ ‘ಭಾರತ್ ಜೋಡೋ ಯುವಕರ ಸಂಘ’ ರಚಿಸಲಾಗುವುದು. ಇದಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುವುದು, ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ಸಿಎಂ ತಿಳಿಸಿದರು.ಇದೇ ವೇಳೆ, ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಸುಗಮ ಸಂಚಾರಕ್ಕಾಗಿ ವರ್ತುಲ ರಸ್ತೆ (Ring Road) ನಿರ್ಮಿಸಲು ಹಾಗೂ ಸೂಕ್ತ ಗ್ರಿಡ್ ರೂಪಿಸಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಕ್ತ ನಿರ್ದೇಶನ ನೀಡಿದ್ದಾರೆ.
Towards a Corruption-Free Karnataka with People-Friendly and Responsive Governance
Key directions issued during the progress review meeting with Deputy Commissioners, SPs, CEOs, DFOs and senior government officials, and the important points shared during the subsequent press… https://t.co/KS9zbkYZaa
— DK Shivakumar (@DKShivakumar) June 13, 2026
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















