ಬೆಂಗಳೂರು, ಸೆಪ್ಟೆಂಬರ್ 23: ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಕುರಿತ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ನಡುವೆ ಸದನದಲ್ಲೇ ವಾಗ್ವಾದ ನಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ನಾರಾಯಣಸ್ವಾಮಿ ಅವರು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರೊಂದಿಗೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ರೂಪಕಲಾ ಶಶಿಧರ್ ಅವರು ಅವರ ಬಳಿಗೆ ತೆರಳಿ ಏರುಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ರೂಪಕಲಾ ಅವರು ಕೈ ಸನ್ನೆ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದು, ಬಳಿಕ ಮೇಜನ್ನು ಬಡಿದು ಅಸಮಾಧಾನ ಹೊರಹಾಕಿದರು. ತಮ್ಮ ಬಗ್ಗೆ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ. ಗಲಾಟೆಗೆ ನಿಖರ ಕಾರಣದ ಬಗ್ಗೆ ಶಾಸಕರಿಂದ ಸ್ಪಷ್ಟ ಪ್ರತಿಕ್ರಿಯೆ ಹೊರಬಿದ್ದಿಲ್ಲ.
ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮೇಜು ಬಡಿಯದಂತೆ ರೂಪಕಲಾ ಅವರಿಗೆ ಸೂಚಿಸಿದರು. ಬಳಿಕ ಕೆಲ ಶಾಸಕರು ರೂಪಕಲಾ ಶಶಿಧರ್ ಅವರನ್ನು ಸದನದಿಂದ ಹೊರಗೆ ಕರೆದುಕೊಂಡು ಹೋದರು. ಈ ಸಂದರ್ಭದಲ್ಲಿ ಅವರು ಕಣ್ಣೀರಿಡುತ್ತಲೇ ಹೊರಗೆ ತೆರಳಿದರು.ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರದ ಚರ್ಚೆಯ ನಡುವೆಯೇ ನಡೆದ ಈ ಘಟನೆ ಸದನದ ಗಮನ ಸೆಳೆಯಿತು.










