Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಗರ ಸ್ವಚ್ಛತೆಯ ಜತೆಗೆ ನಿಮ್ಮ ಆರೋಗ್ಯಕ್ಕೂ ಆದ್ಯತೆ ನೀಡಿ: ಪೌರ ಕಾರ್ಮಿಕರಿಗೆ ಬಿ ಟಿ ಕುಮಾರಸ್ವಾಮಿ ಸಲಹೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 : ಪ್ರತಿನಿತ್ಯವು ನಗರ ಸ್ವಚ್ಚತೆಯಲ್ಲಿ ತೊಡಗುವ ನೀವುಗಳು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಕಡೆ ಗಮನ ಕೊಡಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪೌರ ಕಾರ್ಮಿಕರಿಗೆ ಕರೆ ನೀಡಿದರು.

 

ಲಿಡ್ಕರ್ ಭವನದಲ್ಲಿ ಬುಧವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಗರ ಸ್ವಚ್ಚತೆ, ಸಾರ್ವಜನಿಕರ ಆರೋಗ್ಯ ಎರಡು ನಿಮ್ಮ ಕೈಯಲ್ಲಿದೆ. ಜನಸಂಖ್ಯೆಗನುಗುಣವಾಗಿ ನಗರದಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಿದೆ. ಮುಖ್ಯ ರಸ್ತೆ, ಉಪ ರಸ್ತೆ, ನಗರ ವಿಸ್ತೀರ್ಣ ಎಷ್ಟಿದೆ ಎನ್ನುವುದನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತನ್ನಿ. ಆಗ ಮಾನವ ಸಂಪನ್ಮೂಲವನ್ನು ಹೆಚ್ಚಿಸಲು ಸಾಧ್ಯ. ಜನ ಎಲ್ಲೆಂದರಲ್ಲಿ ಕಸವನ್ನು ಎಸೆಯುವುದರಿಂದ ಸ್ವಚ್ಚತೆ ದೊಡ್ಡ ಸವಾಲಾಗಿದೆ. ಅಂತಹ ಕಡೆ ಸಿ.ಸಿ.ಕ್ಯಾಮರ ಅಳವಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ಕುಟುಂಬಕ್ಕೆ ಸಮಯ ನೀಡದೆ ದಿನವೂ ಬೆಳಗಿನ ಜಾವ ನಗರ ಸ್ವಚ್ಚತೆಯಲ್ಲಿ ತೊಡಗುವ ನೀವುಗಳು ನಿಮ್ಮಂತೆ ಮಕ್ಕಳನ್ನು ಪೌರ ಕಾರ್ಮಿಕರನ್ನಾಗಿ ಮಾಡಬೇಡಿ. ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಬಳಸಿಕೊಂಡು ಶಿಕ್ಷಣವಂತರನ್ನಾಗಿಸಿ. ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗಬೇಡಿ. ಅದರಿಂದ ಹಣ, ಆರೋಗ್ಯ ಎರಡು ಹಾಳಾಗುತ್ತದೆ. ಶುದ್ದವಾದ ಆಹಾರ, ನೀರು ಸೇವಿಸಿ. ಕೆಟ್ಟ ಚಟಗಳಿಗೆ ಖರ್ಚು ಮಾಡುವ ಹಣವನ್ನು ಕುಟುಂಬಕ್ಕೆ ಬಳಸಿ ಸದೃಢವಾಗಿಸಿ ಎಂದು ಹೇಳಿದರು.

ವಸತಿ ಶಾಲೆಗಳಲ್ಲಿ ಪೌರ ಕಾರ್ಮಿಕರ ಮಕ್ಕಳಿಗೆ ಮೀಸಲಾತಿಯಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯನ್ನು ಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ನಡೆದಾಗ ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರಬಹುದು. ವಿದ್ಯೆ ಸಾಧಕನ ಸ್ವತ್ತೆ ವಿನಃ ಸೋಮಾರಿಯ ಸ್ವತ್ತಾಗಲಾರದು. ನಿಮ್ಮ ಕ್ಷೇಮಾಭಿವೃದ್ದಿಗಾಗಿ ಸರ್ಕಾರ, ಇಲಾಖೆ ಜೊತೆಗಿದೆ. ನಗರದಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಿ ಸ್ವಚ್ಚತೆಯನ್ನು ಕಾಪಾಡಿ ಎಂದರು.

ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ.ದುರುಗೇಶ್ ಮಾತನಾಡಿ ಮುನ್ನೂರು ಪೌರ ಕಾರ್ಮಿಕರಾದರೂ ನಗರದಲ್ಲಿ ಸ್ವಚ್ಚತೆಗೆ ಇರಬೇಕು. ಕೇವಲ 160 ಪೌರ ಕಾರ್ಮಿಕರಿರುವುದರಿಂದ ಸ್ವಚ್ಚತೆ ಕಾಪಾಡುವುದು ಕಷ್ಟವಾಗುತ್ತಿದೆ. ನೇರ ನೇಮಕಾತಿಯಾಗಿರುವ ಎಂಟು ಪೌರ ಕಾರ್ಮಿಕರಿಗೆ ಹತ್ತು ತಿಂಗಳಾದರೂ ಇನ್ನು ಆದೇಶ ನೀಡಿಲ್ಲ. ಇವರಲ್ಲಿ ಯಾರಾದರೂ ಆಕಸ್ಮಿಕವಾಗಿ ಮರಣ ಹೊಂದಿದರೆ ಯಾರು ಹೊಣೆ? ಇನ್ನು ಎರಡು ಮೂರು ದಿನಗಳಲ್ಲಿ ಆದೇಶ ಕೊಡಿಸಬೇಕು. ಪೌರ ಕಾರ್ಮಿಕರಿಗೆ ನಿವೇಶನವಿಲ್ಲವೆಂದು ಮೂರ್ನಾಲ್ಕು ವರ್ಷಗಳಿಂದಲೂ ನಗರಸಭೆ ಗಮನಕ್ಕೆ ತರುತ್ತಿದ್ದೇವೆ. ಒಬ್ಬ ಪೌರ ಕಾರ್ಮಿಕನ ಮನೆಯಲ್ಲಿ ನಾಲ್ಕೈದು ಕುಟುಂಬಗಳು ವಾಸಿಸುತ್ತಿವೆ. ನಿವೃತ್ತಿಯಾಗಿರುವವರನ್ನು ಗಣನೆಗೆ ತೆಗೆದುಕೊಳ್ಳಿ. ಮಹಿಳಾ ಕಾರ್ಮಿಕರು ಕಸ ಲೋಡಿಂಗ್ ಮಾಡುತ್ತಿರುವುದು ನಿಲ್ಲಬೇಕೆಂದು ಒತ್ತಾಯಿಸಿದರು.

ಪೌರ ಕಾರ್ಮಿಕರಿಂದ ದುಡಿಸಿಕೊಳ್ಳುವುದಷ್ಟೆ ಅಲ್ಲ. ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಕೊಡಬೇಕು. ಆರೋಗ್ಯ ತಪಾಸಣೆಯನ್ನು ಖಾಸಗಿ ವಹಿಸಿರುವುದರಿಂದ ಗುಣ ಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಯಾಗಬೇಕೆಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತರಾದ ಎಸ್.ಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಜಗದೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು, ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕಿ ರುಕ್ಮಿಣಿ, ನಗರಸಭೆ ಮ್ಯಾನೇಜರ್ ಜಯಣ್ಣ, ನಗರಾಭಿವೃದ್ದಿ ಕೋಶದ ಮ್ಯಾನೇಜರ್ ರೇಣುಕಮ್ಮ ಇವರುಗಳು ವೇದಿಕೆಯಲ್ಲಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now