Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮದ್ಯಪಾನ ನಿಷೇಧಕ್ಕೆ ಸರ್ಕಾರ ತಲೆಬಾಗುವಂತೆ ಜನಾಂದೋಲನ ರೂಪಿಸಿ: ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ

---Advertisement---

ನ್, ಹೊಸದುರ್ಗ(ಸಾಣೆಹಳ್ಳಿ).ಸೆ.23:
ಈ ಹಿಂದೆ ತರಳುಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಮದ್ಯಪಾನ ವಿರೋಧವಾಗಿ ನಡೆಸಿದ ಸತ್ಯಾಗ್ರಹ, ವಿವಿಧ ಊರುಗಳಲ್ಲಿ ಕೈಗೊಂಡ ಪಾದಯಾತ್ರೆಯಿಂದಾಗಿ ಮದ್ಯಪಾನ ಮುಕ್ತ ಆಂದೋಲನ ಯಶಸ್ವಿಯಾಗಿತ್ತು. ಇದೇ ಮಾದರಿಯಲ್ಲಿ ಪ್ರತಿಯೊಬ್ಬ ಮಠಾಧಿಪತಿಗಳೂ ತಮ್ಮ ಮಿತಿಯಲ್ಲಿ ಶ್ರಮಿಸಿದರೆ ಸರ್ಕಾರವು ತಲೆಬಾಗುವಂತಹ ಜನಾಂದೋಲನವನ್ನು ರೂಪಿಸಬಹುದು ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾಮಠದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಾಗೃತಿ ಶಿಬಿರಗಳ ಆಯೋಜನೆ, ಕಾರ್ಯ ನಿರ್ವಹಣೆ ಕುರಿತಂತೆ ಏರ್ಪಡಿಸಿದ್ದ, ರಾಜ್ಯದ ಮಠಾಧೀಶರ ದುಂಡುಮೇಜಿನ ಸಭೆಯ ಪೂರ್ವಭಾವಿ ಸಿದ್ಧತಾ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ದುಶ್ಚಟಗಳಿಂದ ಕುಟುಂಬಗಳನ್ನು ಸಂರಕ್ಷಣೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಮದ್ಯಪಾನ ನಿಯಂತ್ರಣ ಎಂಬುದು ಯಾರೋ ಒಬ್ಬರು ಮಾಡುವ ಕೆಲಸವಲ್ಲ. ಸಮಾಜದಲ್ಲಿ ಮದ್ಯಪಾನದ ದುಷ್ಪರಿಣಾಮಗಳು ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ, ನಿರಾಶರಾಗದೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮುನ್ನುಗ್ಗಿದರೆ ಮಾತ್ರ ಮದ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ. ಇಂತಹ ಈ ಸಮಾಜಮುಖಿ ಹೋರಾಟಕ್ಕೆ ಮಠಾಧಿಪತಿಗಳ ಒಕ್ಕೂಟದ ಸಂಪೂರ್ಣ ಬೆಂಬಲವಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಮದ್ಯಪಾನ ನಿಷೇಧದ ಪರವಾಗಿ ಮಠಾಧಿಪತಿಗಳು ದೃಢವಾಗಿ ನಿಲ್ಲುವುವುದು ಇಂದಿನ ಅಗತ್ಯವಾಗಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರತಿಪಾದಿಸಿದರು. ಒಳ್ಳೆಯ ಕೆಲಸಗಳಿಗೆ ಅಡಚಣೆಗಳು ಬಹಳ. ಅವುಗಳೆಲ್ಲವನ್ನು ಮೀರಿ ಸತ್ ಮಾರ್ಗದಲ್ಲಿ ಸಮಾಜವನ್ನು ಮುನ್ನಡೆಸಬೇಕು. ಸಮಾಜದ ಒಳಿತಿಗಾಗಿ ತಮ್ಮನ್ನೂ ಸೇರಿದಂತೆ ಇತರ ಮಠಾಧೀಶರುಗಳು ಕಟಿಬದ್ಧರಾಗಿ ನಿಲ್ಲುವುದಾಗಿ ತಿಳಿಸಿದ ಸ್ವಾಮೀಜಿಗಳು ಮಂಡಳಿಯ ಒಳ್ಳೆಯ ಕಾರ್ಯಗಳಿಗೆ ಸದಾ ತಮ್ಮ ಬೆಂಬಲ ಇರುವುದಾಗಿ ತಿಳಿಸಿದರು.

ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿಗಳು ಮಾತನಾಡಿ, ಗ್ರಾಮ ಸಭೆಗಳ ನಿರ್ಣಯಗಳು ಸಂಸದೀಯ ನಿರ್ಣಯಗಳಿಗೆ ಸರಿ ಸಮಾನವಾಗಿರುತ್ತದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಎಲ್ಲರೂ ಜಾತ್ಯತೀತವಾಗಿ ಧರ್ಮಾತೀತವಾಗಿ ಒಂದಾಗಬೇಕು. ಈ ದಿಸೆಯಲ್ಲಿ ಪ್ರಯತ್ನವನ್ನು ಕೊಂಡೊಯ್ಯಬೇಕು ಎಂದರು.
ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಮದ್ಯಪಾನವು ಮನುಷ್ಯನ ಆರೋಗ್ಯ, ಕುಟುಂಬ ಹಾಗೂ ಸಾಮಾಜಿಕ ಜೀವನವನ್ನು ನಾಶಪಡಿಸುತ್ತಿದ್ದು, ಕ್ಯಾನ್ಸರ್‍ಗಿಂತಲೂ ಭೀಕರವಾಗಿ ಸಮಾಜವನ್ನು ವ್ಯಾಪಿಸುತ್ತಿದೆ. ಯುವಕರು ಮಾತ್ರವಲ್ಲದೆ ಸಣ್ಣ ಸಣ್ಣ ಶಾಲಾ ಮಕ್ಕಳು ಸಹ ದುವ್ರ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ. ಇತ್ತೀಚೆಗೆ ಹಳ್ಳಿಗಳಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿ ವಾಟರ್ ಪಾಕೇಟ್‍ಗಳಂತೆ ಮದ್ಯದ ಪಾಕೇಟ್‍ಗಳನ್ನು ಮುಕ್ತವಾಗಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಕ್ಷಣವೇ ತಡೆಯಬೇಕಾಗಿದೆ ಎಂದರು.

ಇಳಕಲ್ಲಿನ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಪ್ರತಿಯೊಂದು ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ‘ಭವಿಷ್ಯದಲ್ಲಿ ಆಡಳಿತದ ಅಧಿಕಾರಕ್ಕೆ ಚುಕ್ಕಾಣಿ ಹಿಡಿದರೆ, ದುಶ್ಚಚಟಗಳು ಹಾಗೂ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ ಎಂಬ ಭರವಸೆ ಮತ್ತು ಪ್ರತಿಜ್ಞೆಯನ್ನು ಸ್ವೀಕರಿಸಿ ಜಾಗೃತಿ ಮೂಡಿಸಬೇಕು. ಚುನಾವಣೆ ಹಾಗೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಯುವಕರು ಮದ್ಯಪಾನಕ್ಕೆ ದಾಸರಾಗುವುದನ್ನು ತಡೆಯಲು ಚುನಾವಣಾ ಆಯೋಗಕ್ಕೆ ಸೂಕ್ತ ಮನವಿ ಸಲ್ಲಿಸಬೇಕು. ಸರ್ಕಾರಕ್ಕೆ ಮದ್ಯಪಾನದಿಂದ ಬರುವ ಸುಮಾರು ರೂ.45,000 ಕೋಟಿ ಆದಾಯಕ್ಕೆ ಪರ್ಯಾಯವಾಗಿ, ತೆರಿಗೆ ಹಾಗೂ ಇತರ ಮೂಲಗಳಿಂದ ಆದಾಯ ಸಂಗ್ರಹಿಸುವ ಕುರಿತು ವರದಿ ನೀಡಲು ಶ್ರೇಷ್ಠ ಆರ್ಥಿಕ ತಜ್ಞರ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡುವುದು. ಮಹಾತ್ಮ ಗಾಂಧೀಜಿಯವರ ಕನಸಿನಂತೆ, ಗ್ರಾಮ ಮಟ್ಟದಲ್ಲಿ ನಶಮುಕ್ತ ವಾತಾವರಣ ನಿರ್ಮಿಸಲು ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ನಿಷೇಧಿಸುವ ಸರ್ವಾಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕು ಎಂದರು.

ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ತೀವ್ರವಾಗಿ ಹರಡುತ್ತಿರುವ ಮದ್ಯಪಾನ ಹಾಗೂ ಡ್ರಗ್ಸ್‍ನಂತಹ ದುಷ್ಟಟಗಳ ವಿರುದ್ಧ ಬೃಹತ್ ಜನಜಾಗೃತಿ ಆಂದೋಲನ ರೂಪಿಸಲು ನಿರ್ಧರಿಸಲಾಗಿದೆ. ಶರಣಬಸಪ್ಪನವರು, ವಿವಿಧ ಪೂಜ್ಯ ಶ್ರೀಗಳು, ಮಠಾಧೀಶರು ಹಾಗೂ ಜನನಾಯಕರ ಮಾರ್ಗದರ್ಶನದಲ್ಲಿ ಈ ಸತ್ಕಾರ್ಯಕ್ಕೆ ಶ್ರೀಕಾರ ಬರೆಯಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಮಾತನಾಡಿ, ಮದ್ಯ ಸೇವನೆಯಂಥ ಮಾರಕ ಚಟಗಳು ಕೌಟುಂಬಿಕ ಜೀವನದಲ್ಲಿ ಬೀರುವ ಪರಿಣಾಮ ಅತ್ಯಂತ ಗಂಭೀರವಾದುದು. ಯುವ ಪೀಳಿಗೆ ದೇಶದ ಆಸ್ತಿ. ಅಂಥಹ ಯುವ ಪೀಳಿಗೆಯೇ ಮಾರಕ ದುಶ್ಚಟಗಳಿಗೆ ಬಲಿಯಾದರೆ ದೇಶದ ಸ್ಥಿತಿ ಏನಾಗಬೇಡ? ನಗರ, ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿ ಮದ್ಯ, ಮಾದಕ ವಸ್ತು ಸೇವನೆ ದುಶ್ಚಟಗಳ ವಿರುದ್ಧ ಹೋರಾಡಬೇಕು. ಮುಂದಿನ ದಿನಗಳಲ್ಲಿ ದುಂಡು ಮೇಜಿನ ಮಹಾಸಮಾವೇಶದ ಕಾರ್ಯ ಯೋಜನೆ ಸಿದ್ಧ ಪಡಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ದುಡಿಯುವ ಶಕ್ತಿ ಶೇ. 49 ರಷ್ಟಿದ್ದರೆ, ದುಡಿಯದ ಶಕ್ತಿ ಶೇ. 51 ರಷ್ಟಿದೆ. ಶೇ. 39 ರಷ್ಟು ಮಕ್ಕಳಿದ್ದು, ಶೇ. 50 ರಷ್ಟು ಜನರು ಮದ್ಯಪಾನ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಅತ್ಯಂತ ಭಯಾನಕ ಸ್ಥಿತಿಯನ್ನು ತೋರಿಸುತ್ತದೆ. ದೇಶದ ಆಸ್ತಿಯಾದ ಯುವಕರು ಮತ್ತು ಮಕ್ಕಳು ಸನ್ಮಾರ್ಗದಲ್ಲಿ ಸಾಗಲು ಸಂಸ್ಕಾರ ಹಾಗೂ ಮೌಲ್ಯಯುತ ಬದುಕು ಅಗತ್ಯ. ಆಸ್ತಿಗಿಂತ ಹೆಚ್ಚಾಗಿ ಮಕ್ಕಳಿಗೆ ಉತ್ತಮ ವಿಚಾರಗಳನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಳ್ಳಿಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದನ್ನು ತಡೆಯಲು ಜನಸಾಮಾನ್ಯರು ಹಾಗೂ ಸರ್ಕಾರ ಜಂಟಿಯಾಗಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ಸಭೆಯಲ್ಲಿ ದಾವಣಗೆರೆಯ ಚಿಂತಕ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಳಿಯ ಕಾರ್ಯದರ್ಶಿ ರೂಪ ಸ್ವಾಗತಿಸಿ ನಿರೂಪಿಸಿದರು. ನಾಗರಾಜ್ ಹೆಚ್ ಎಸ್ ವಚನಗೀತೆಗಳನ್ನು ಹಾಡಿದರು. ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ, ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿಗಳು, ಶಹಾಪುರ ಮುಡಬಾಳದ ಶ್ರೀ ಸದ್ಗುರು ತ್ರಿಶೂಲಪ್ಪ ಶರಣರು, ಶಹಾಪುರ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀ ಶರಣು ಬಿ ಗದ್ದುಗೆ, ಶ್ರೀ ಶಿವ ಪ್ರಿಯಾನಂದ ಸ್ವಾಮೀಜಿ, ಬ್ರಹ್ಮ ಕುಮಾರಿ ಲೀಲಕ್ಕ, ಡಿ.ಆರ್.ಪಾಟೀಲ್, ಮಹಿಮಾ ಪಟೇಲ್, ಗಾಂಧಿ ಭವನದ ಅಧ್ಯಕ್ಷ ರಾದ ವೂಡೇ ಪಿ ಕೃಷ್ಣ, ಪ್ರತಾಪ್ ಹೆಗಡೆ, ಕೆ ಚಂದ್ರಪ್ಪ, ಈಶ್ವರಪ್ಪ, ಸಂಪತ್, ಕೊಪ್ಪಳ ಗಾಂಧಿಬಳಗದ ಪ್ರಮುಖರಾದ ಪ್ರಾಣೇಶ ಪೂಜಾರ, ಶರಣಪ್ಪ ಬಾಚಾಲಪುರ, ಪ್ರಭುರಾಜ, ಶಿವಪ್ಪ ಹಡಪದ, ಪ್ರಮೋದ ಕುಲಕರ್ಣಿ, ಸಾವಿತ್ರಿ ಮುಜಮದಾರ, ಮದ್ಯ ನಿಷೇಧ ಆಂದೋಲನದ ಸ್ವರ್ಣ ಭಟ್, ಮೋಕ್ಷಮ್ಮ, ವಿರೂಪಮ್ಮ, ಚಿಂತಕರಾದ ಬಸವಲಿಂಗಪ್ಪ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now