ಮಾರ್ಚ್ ಅಂತ್ಯದ ಒಳಗೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ : ಸಂಸದ ಗೋವಿಂದ ಎಂ. ಕಾರಜೋಳ

7 Min Read

ಚಿತ್ರದುರ್ಗ. ಫೆ.21: ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಇರುವುದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಜರುಗಿದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಜಿಲ್ಲೆಯಲ್ಲಿ ಶೇ. 70ರಷ್ಟು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಬಡವರಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಈ ಬಡವರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿಯಬಾರದು. ಪ್ರಸ್ತುತ ಜಿಲ್ಲೆಯು ಎಸ್.ಎಸ್.ಎಲ್.ಸಿ ಪಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲಿದೆ. ಶೈಕ್ಷಣಿಕ ಪ್ರಗತಿಯಲ್ಲಿ ಜಿಲ್ಲೆಯನ್ನು ಮೊದಲ 3-4 ಸ್ಥಾನಗಳಿಗೆ ತರಲು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಬಡವರಿಗಾಗಿ ಮಂಜೂರಾದ ಮನೆಗಳನ್ನು ಶೀಘ್ರವಾಗಿ ನಿರ್ಮಿಸಿಕೊಳ್ಳಲು ಉತ್ತೇಜನ ನೀಡಬೇಕು. ಒಂದು ವೇಳೆ ಫಲಾನುಭವಿಗಳು ಆಸಕ್ತಿ ತೋರಿಸದಿದ್ದರೆ, ಅರ್ಹ ಮತ್ತು ಅಗತ್ಯವಿರುವ ಇತರ ಬಡ ಜನರಿಗೆ ಆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

 

ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ:
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಧಾನಮಂತ್ರಿಗಳ ಆಶಯದಂತೆ ‘ಜಲಜೀವನ್ ಮಿಷನ್’ ಅಡಿಯಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಜಿಲ್ಲೆಯಲ್ಲಿ ನದಿಗಳ ಲಭ್ಯತೆ ಕಡಿಮೆ ಇರುವುದರಿಂದ ಮೇಲ್ಮೈ ನೀರು ಒದಗಿಸುವುದು ಸವಾಲಿನ ಕೆಲಸವಾಗಿದ್ದರೂ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

 

ಕೃಷಿ ಮತ್ತು ಪೂರಕ ಇಲಾಖೆಗಳಿಗೆ ಒತ್ತು:
ಕೇಂದ್ರ ಬಜೆಟ್‍ನಲ್ಲಿ ಕೃಷಿ ಮತ್ತು ಅದರ ಉಪ-ಕ್ಷೇತ್ರಗಳಾದ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಪ್ರಧಾನಮಂತ್ರಿಗಳು ಕೂಡ ಹೈನುಗಾರಿಕೆಗೆ ವಿಶೇಷ ಒತ್ತು ನೀಡುವಂತೆ ಕರೆ ನೀಡಿದ್ದಾರೆ.  ಈ ಯೋಜನೆಗಳ ಲಾಭ ಜಿಲ್ಲೆಯ ರೈತರಿಗೆ ತಲುಪಿಸಲು ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಪಶುಸಂಗೋಪನೆಗೆ ಅಗತ್ಯ ಇರುವ ಪ್ರಸ್ತಾವನೆಗಳನ್ನು ಸಲ್ಲಿಸಿದರೆ, ವೈಯಕ್ತಿಕವಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅನುಮೋದನೆ ಕೊಡಿಸುವುದಾಗಿ ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.

 

ಜೆಜೆಎಂ ಕಳಪೆ ಕಾಮಗಾರಿ ಬಿಲ್ ಪಾವತಿ ತಡೆಹಿಡಿಯಲು ಸೂಚನೆ:
ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳು ಅತ್ಯಂತ ಕಳಪೆಯಾಗಿರುವ ಬಗ್ಗೆ ಸಂಸದ ಗೋವಿಂದ ಎಂ. ಕಾರಜೋಳ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 

ಜಿಲ್ಲಾ ಪಂಚಾಯತ್ ಸಿಇಓ ಡಾ. ಆಕಾಶ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯ ಒಟ್ಟು 1,500 ಜೆಜೆಎಂ ಕಾಮಗಾರಿಗಳ ಪೈಕಿ ಶೇ. 30ರಷ್ಟು ಅಂದರೆ ಸುಮಾರು 500 ಕಾಮಗಾರಿಗಳನ್ನು ತಾಲೂಕು ಮಟ್ಟದ ತಾಂತ್ರಿಕ ತಂಡದಿಂದ ತಪಾಸಣೆ ನಡೆಸಲಾಗಿದೆ. ವರದಿಯಲ್ಲಿ 160 ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ. ರಸ್ತೆ ಮರುನಿರ್ಮಾಣ, ಪೈಪ್‍ಗಳ ಗುಣಮಟ್ಟ ಮತ್ತು ನೀರಿನ ಒತ್ತಡದ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿವೆ ಎಂಬುದಾಗಿ ವರದಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.

 

ಕಳಪೆ ಕಾಮಗಾರಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಗೋವಿಂದ ಎಂ ಕಾರಜೋಳ, ಕೇಂದ್ರ ಸರ್ಕಾರ ಯೋಜನೆಯಡಿ ಜಿಲ್ಲೆಗೆ ಎರಡು ಸಾವಿರಾರು ಕೋಟಿ ಅನುದಾನದ ನೀಡಿದೆ. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರ ಹಣ ಪೆÇೀಲಾಗುವುದನ್ನು ಸಹಿಸಲು ಆಗುವುದಿಲ್ಲ. ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ನೀಡಬೇಕಿದ್ದ ಬಿಲ್ ಪಾವತಿಯನ್ನು ತಕ್ಷಣವೇ ತಡೆ ಹಿಡಿಯಬೇಕು.

 

ಕಾಮಗಾರಿಗಳು ಪೂರ್ಣಗೊಂಡು, ಗುಣಮಟ್ಟದ ಪ್ರಮಾಣಪತ್ರ ದೊರೆಯುವವರೆಗೆ ಕೇಂದ್ರ ಸರ್ಕಾರ ಬಾಕಿ ಇರುವ ರೂ. 450 ಕೋಟಿ ಅನುದಾನ ನೀಡುವುದಿಲ್ಲ. ಇದರಿಂದ ಯೋಜನೆಗೆ ಅನುದಾನ ಕೊರತೆ ಉಂಟಾಗುತ್ತದೆ. ಕೂಡಲೇ ಲೋಪದೋಷ ಸರಿಪಡಿಸುವಂತೆ ಸೂಚಿಸಿದರು.

 

ಜಲ ಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ ಸಾಮಾನ್ಯ ವರದಿಯನ್ನು ಮಾತ್ರ ಪಡೆಯಲಾಗಿದೆ. ಇನ್ನು 15 ದಿನಗಳಲ್ಲಿ ಪೈಪ್ ಗುಣಮಟ್ಟ ಮತ್ತು ನೀರು ಪರೀಕ್ಷೆಯ ತಾಂತ್ರಿಕ ವರದಿ ಪಡೆಯಲಾಗುವುದು. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಇಓ ಡಾ.ಆಕಾಶ್ ತಿಳಿಸಿದರು.

 

ಜಿಲ್ಲೆಯಾದ್ಯಂತ 1026 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 765 ಘಟಕಗಳು ಸುಸ್ಥಿಯಲ್ಲಿವೆ. ಉಳಿದ 261 ಘಟಕಗಳಲ್ಲಿ 121 ದುರಸ್ತಿ ಮಾಡಿ ಸಂಬಂದ ಗ್ರಾಮ ಪಂಚಾಯಿತಿ ಹಸ್ತಾಂತರ ಮಾಡಲಾಗುವುದು. 140 ಘಟಕಗಳು ಸಂಪೂರ್ಣ ಹಾಳಾಗಿದ್ದು, ಕಾರ್ಯಚರಣೆ ನಿಲ್ಲಿಸಿವೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ಸಭೆಯಲ್ಲಿ ಮಾಹಿತಿ ನೀಡಿದರು.

 

140 ಘಟಕಗಳ ದುರಸ್ತಿ ಸಾಧ್ಯತೆಯನ್ನು ಪರಿಶೀಲಿಸಿ, ಬೇಸಿಗೆ ಆರಂಭವಾಗುವ ಮುನ್ನವೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಗಡುವು ನೀಡಿದರು.

 

ವನ್ಯಜೀವಿಗಳ ಸುರಕ್ಷತೆಗೆ ಸೂಚನೆ :
ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಐದು ಕರಡಿಗಳ ಸಾವಿಗೆ ಕಾರಣರಾದವರ ಮೇಲೆ ಕೇವಲ ಅಪರಿಚಿತ ವ್ಯಕ್ತಿಗಳಿಂದ ಸಾವು ಎಂದು ಅಪರಿಚಿತರ ಮೇಲೆ ಮಾತ್ರ ಎಫ್‍ಐಆರ್ ದಾಖಲಿಸಿರುವುದಕ್ಕೆ ಸಂಸದ ಗೋವಿಂದ ಎಂ ಕಾರಜೋಳ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 

ಗಣಿ ಪ್ರದೇಶಗಳಲ್ಲಿ ನಡೆಯುವ ಬ್ಲಾಸ್ಟಿಂಗ್ ಅಬ್ಬರಕ್ಕೆ ಹೆದರಿ ಕರಡಿಗಳು ಸೇರಿದಂತೆ ಹಲವು ವನ್ಯಪ್ರಾಣಿಗಳು ರಸ್ತೆಗೆ ಬಂದು ಅಪಘಾತಕ್ಕೀಡಾಗುತ್ತಿವೆ. ಆದರೆ ಅಕ್ರಮ ಬ್ಲಾಸ್ಟಿಂಗ್ ತಡೆಯಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜೋಗಿಮಟ್ಟಿ, ಮಾರಿಕಣಿವೆ, ಹಾಗೂ ವಿವಿಧ ಭಾಗದ ಸುಮಾರು 112 ಎಕರೆ ಅರಣ್ಯ ಭೂಮಿಯಲ್ಲಿ ವಿಂಡ್‍ಫೆÇೀರ್ಸ್ ಇಂಡಿಯಾ ಕಂಪನಿ ಗಾಳಿ ಯಂತ್ರಗಳನ್ನು ಅಳವಡಿಸಿದೆ. ಪರವಾನಿಗೆ ನವೀಕರಣಕ್ಕೆ ಶಿಫಾರಸ್ಸು ಮಾಡಿದವರು ಯಾರು. ಕೇಂದ್ರ ಸರ್ಕಾರ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.

 

ವಿಂಡ್‍ಫೆÇೀರ್ಸ್ ನಿಯಮ ಉಲ್ಲಂಘನೆಗಾಗಿ ಕೇಂದ್ರ ಸರ್ಕಾರ ರೂ.23 ಕೋಟಿ ದಂಡ ವಿಧಿಸಿದೆ. ಕಂಪನಿ ದಂಡ ಪಾವತಿಸಿದ್ದು 20 ವರ್ಷಗಳ ಅವಧಿಗೆ ಗುತ್ತಿಗೆ ಪರವಾನಿಗೆಯನ್ನು ನವೀಕರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿನ ಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸ್ಥಳೀಯ ಅಭಿವೃದ್ಧಿ ಮತ್ತು ಅರಣ್ಯ ಸಂರಕ್ಷಣೆಗೆ ಸರಿಯಾಗಿ ಬಳಸುತ್ತಿಲ್ಲ. ಈ ಕುರಿತು ಕಂಪನಿಗಳೊಂದಿಗೆ ಚರ್ಚಿಸುವಂತೆ ಜಿಲ್ಲಾಧಿಕಾರಿಗೆ ಸಂಸದ ಗೋವಿಂದ ಎಂ ಕಾರಜೋಳ ಸೂಚಿಸಿದರು.

 

ವಿದ್ಯಾರ್ಥಿಗಳಿಗೆ ಇಲಿಜ್ವರ : ಸ್ವಚ್ಛತೆ ಕಾಪಾಡಲು ತಾಕೀತು

ಐಮಂಗಲ ಹತ್ತಿರದ ಮರಡಿಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ 17 ವಿದ್ಯಾರ್ಥಿಗಳು ಇತ್ತೀಚೆಗೆ ಜ್ವರದಿಂದ ಬಳಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.  ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿ ಹೋಗಿದ್ದರು.   ರೋಗ ಪರೀಕ್ಷಾ ವರದಿಯಲ್ಲಿ ವಿದ್ಯಾರ್ಥಿಗಳು ಇಲಿಜ್ವರ (ಲೆಪ್ಟೋಸ್ಪಿರೋಸಿಸ್) ಸೋಂಕಿಗೆ ಒಳಗಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿರುತ್ತದೆ.  ಇಲಿ ಅಥವಾ ಪಾರಿವಾಳಗಳಿಂದ ಸೋಂಕಿಗೆ ಒಳಗಾದರೆ ಮಾತ್ರ ಇಲಿಜ್ವರ ಬರುವ ಸಂಭವವಿರುತ್ತದೆ. ವಿದ್ಯಾರ್ಥಿನಿಲಯಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಜ್ವರ ಸಾಂಕ್ರಾಮಿಕವಾಗಿ ಉಲ್ಬಣಗೊಳ್ಳಲು ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ಹಾಸ್ಟೆಲ್ ಗಳಿಗೆ ಭೇಟಿ ನೀಡಿ, ಅಲ್ಲಿನ ಸ್ವಚ್ಛತೆ, ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು. ದಿಶಾ ಸಮಿತಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ತಾಕೀತು ಮಾಡಿತು.

 

ಸಿಎಸ್‍ಆರ್ ನಿಧಿ ಬಳಕೆ ಕುರಿತು ಕಂಪನಿಗಳಿಂದ ವರದಿ :
ಜಿಲ್ಲೆಯಲ್ಲಿರುವ ಕಂಪನಿಗಳು, ಕಾರ್ಖಾನೆ, ಬ್ಯಾಂಕ್‍ಗಳು ಸೇರಿದಂತೆ ನಾನಾ ಸಂಸ್ಥೆಗಳು ಸಿ.ಎಸ್.ಆರ್. ನಿಧಿಯನ್ನು ಅವು ಕಾರ್ಯ ನಿರ್ವಹಿಸುವ ಜಿಲ್ಲೆಯಲ್ಲಿಯೇ ತಮ್ಮ ಸಂಸ್ಥೆಯ ಆದಾಯದ ಶೇ. 2 ರಷ್ಟು ಖರ್ಚು ಮಾಡಬೇಕೆಂಬ ನಿಯಮವಿದೆ.  ಆದರೆ ಕೆಲ ಕಂಪನಿಗಳು ತಮ್ಮ ಕೇಂದ್ರ ಕಚೇರಿ ಇರುವ ಮುಂಬೈ ಅಥವಾ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ನಾನಾ ಕಾರ್ಯಗಳಿಗಾಗಿ ಬಳಕೆ ಮಾಡಿ, ಇಲ್ಲಿನ ಸಿಎಸ್‍ಆರ್ ನಿಧಿಯ ಖರ್ಚು ವೆಚ್ಚವನ್ನು ತೋರಿಸುತ್ತಿದ್ದು, ಇದರಿಂದ ಜಿಲ್ಲೆಯ ಕೆಲಸ ಕಾರ್ಯಗಳಿಗೆ ಬಳಕೆ ಮಾಡುವಲ್ಲಿ ಲೋಪವೆಸಗುತ್ತಿವೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು.  ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಂಸದ ಗೋವಿಂದ ಕಾರಜೋಳ ಅವರು, ಜಿಲ್ಲೆಯಲ್ಲಿ ಯಾವ ಯಾವ ಕಂಪನಿಗಳು ತಮ್ಮ ಸಿಎಸ್‍ಆರ್ ನಿಧಿಯನ್ನು ಯಾವ ಉದ್ದೇಶಕ್ಕಾಗಿ ಎಷ್ಟು ಖರ್ಚು ವೆಚ್ಚಗಳನ್ನು ಮಾಡಿವೆ ಎಂಬುದರ ಮಾಹಿತಿಯನ್ನು ಪಡೆದು, ಮುಂದಿನ ಸಭೆಯಲ್ಲಿ ಮಂಡಿಸುವಂತೆ ಸೂಚನೆ ನೀಡಿದರು.

 

ಸಭೆಯಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳಾದ ಮನರೇಗಾ, ಪಿಎಂಶ್ರೀ, ಉಜ್ವಲ, ಪಿ.ಎಂ.ಕೆ.ಎಸ್.ವೈ, ಪಿ.ಎಂ.ವಿಶ್ವಕರ್ಮ, ಪಿ.ಎಂ.ಧನಧಾನ್ಯ ಯೋಜನೆ, ನೇರ ರೈಲು ಹಾಗೂ ರೈಲ್ವೇ ಡಬ್ಲೀಕರಣ, ಬೆಳೆನಷ್ಟ ಪರಿಹಾರ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್,  ರೈಲ್ವೇ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ದಿಶಾ ಸಮಿತಿಯ ಸದಸ್ಯರುಗಳು ಉಪಸ್ಥಿರಿದ್ದರು.
==============

Share This Article
Enable Notifications OK No thanks