ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ: ಸಿದ್ದರಾಮಯ್ಯ

suddionenews
1 Min Read

ಬೆಂಗಳೂರು: ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅತಿ ಅಗತ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಾತನಾಡಿದ ಅವರು, ಶತಮಾನಗಳ ಹಿಂದೆ ವ್ಯಕ್ತಿಯ ಕಾಯಕದ ಆಧಾರದ ಮೇಲೆ ಜಾತಿ ನಿರ್ಮಾಣ ಮಾಡಲಾಗಿದೆ. ಈ ಚತುರ್ವರ್ಣ ವ್ಯವಸ್ಥೆ ನಮ್ಮ ನಡುವೆ ಇನ್ನೂ ಜೀವಂತವಾಗಿದೆ.

ಇಂದು ಶೋಷಿತ ಸಮುದಾಯಗಳು ಶಿಕ್ಷಣ ಪಡೆದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಮಾತನಾಡುವ ಧೈರ್ಯ ಬಂದಿದೆ. ಇಂತಹ ವ್ಯವಸ್ಥೆ ಹಿಂದೆ ಇರಲಿಲ್ಲ. ಕೆಲವರು ಜಾತಿ ಸಮ್ಮೇಳನಗಳನ್ನು ಮಾಡೋದು ತಪ್ಪು ಎನ್ನುತ್ತಾರೆ. ಮುಂದೆ ತಮ್ಮ ವಿರುದ್ಧವೇ ಧ್ವನಿ ಎತ್ತಬಹುದು ಎಂಬ ಹತಾಶೆ ಇದಕ್ಕೆ ಕಾರಣ.

ಅವಕಾಶದಿಂದ ವಂಚಿತರಾದ ಜಾತಿಗಳು ಜಾತಿ ಸಮ್ಮೇಳನಗಳನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಅದು ಜಾತೀಯತೆಯಾಗಲ್ಲ, ಸಮಾಜದ ಸಂಪತ್ತನ್ನು ಅನುಭವಿಸುವ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ನಡೆಸಿದರೆ ಮಾತ್ರ ಅದು ಜಾತೀಯತೆ ಆಗುತ್ತದೆ ಎಂದು ಹೇಳಿದ್ದರು.

ನನ್ನ ತಂದೆ, ತಾಯಿ ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಕಾನೂನು ಪದವಿ ಗಳಿಸಿದ್ದಕ್ಕೆ ಇಂದು ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗಿದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಸೂತ್ರಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ವರ್ಗದ ಜನರಿಗೆ ನೀಡಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ. ಸಂವಿಧಾನವು ಸಮಾನತೆಗೆ ಅವಕಾಶ ನೀಡಿರುವುದರಿಂದ ಇಂದು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಇಂಥವರ ಬಗ್ಗೆ ತಳ ಸಮುದಾಯಗಳು ಜಾಗ್ರತೆ ವಹಿಸಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *