Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಿ ಮೋದಿ, ಸೋಮಣ್ಣ ವಿರುದ್ಧ‌ ಸಿಎಂ ಗರಂ : ಯಾಕೆ ಗೊತ್ತಾ..?

---Advertisement---

 

ಬೆಂಗಳೂರು: ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವೇ ನೀಡದ್ದನ್ನು ಖಂಡಿಸಿ, ಕರವೇ ಪ್ರತಿಭಟನೆ ನಡೆಸಿದೆ. ಗೂಡ್ಸ್ ಮ್ಯಾನೇಜರ್ ಮತ್ತು ಎಲ್ಡಿಸಿ ಹುದ್ದೆಗಳಿಗಾಗಿ ಇಂದು (ಮಂಗಳವಾರ) ನಡೆಯಬೇಕಿದ್ದ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ನೀಡಿಲ್ಲ. 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ನಡೆಯಬೇಕಿದ್ದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ನಡೆಸಲು ನೈರುತ್ಯ ರೈಲ್ವೆ ಇಲಾಖೆ ಮುಂದಾಗಿತ್ತು.

 

ನೈರುತ್ಯ ರೈಲ್ವೇ ಇಲಾಖೆಯ 194 ಗೂಡ್ಸ್‌ ರೈಲು ಮ್ಯಾನೇಜರ್‌ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳ ಭಾರೀ ವಿರೋಧದ ತರುವಾಯ ರೈಲ್ವೇ ಇಲಾಖೆಯು ದಿಢೀರನೇ ರದ್ದುಪಡಿಸಿ ಕನ್ನಡಿಗ ಉದ್ಯೋಗಿಗಳನ್ನು ಅತಂತ್ರ ಪರಿಸ್ಥಿತಿಗೆ ತಳ್ಳಿದೆ.

ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬಗ್ಗೆ ಈ ಮೊದಲೇ ಸಾವಿರಾರು ಕನ್ನಡಿಗ ಉದ್ಯೋಗಿಗಳು ಧ್ವನಿಯೆತ್ತಿದ್ದರು. ಶಾಂತ ರೀತಿಯ ಪ್ರತಿಭಟನೆಯನ್ನು, ಪ್ರತಿರೋಧವನ್ನು ನಿರ್ಲಕ್ಷಿಸುತ್ತಾ ಬಂದ ರೈಲ್ವೆ ಇಲಾಖೆ ಪರೀಕ್ಷೆ ಆರಂಭವಾಗುವ ಕೊನೆ ಕ್ಷಣದಲ್ಲಿ ರದ್ದುಮಾಡಿರುವುದು ಈಗಿನ ಗೊಂದಲಕ್ಕೆ ಕಾರಣ. ಪ್ರಾರಂಭದಲ್ಲಿಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗಿನ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆ ಪ್ರಯತ್ನವನ್ನೇ ಮಾಡದೆ, ಕನ್ನಡಿರನ್ನು ತಾತ್ಸಾರ ಭಾವನೆಯಿಂದ ಕಂಡು, ಪ್ರತಿಭಟನೆಯ ಕಾವು ಹೆಚ್ಚಾದ ಕೂಡಲೆ ತರಾತುರಿಯಲ್ಲಿ ಪರೀಕ್ಷೆ ರದ್ದುಪಡಿಸುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ.

ಕನ್ನಡಿಗರಿಗೆ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಅನ್ಯಾಯವಾಗುತ್ತಿರುವುದು ಇದು ಮೊದಲ ಬಾರಿ ಅಲ್ಲ ಬಹುಷಃ ಕೊನೆಯದ್ದೂ ಅಲ್ಲ. ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿಯಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕುಟಿಲತನದಿಂದಾಗಿ ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಮೊದಲಿಂದಲೂ ಅನ್ಯಾಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ. ಇದರ ವಿರುದ್ಧ ಕನ್ನಡಿಗರು ನ್ಯಾಯಕ್ಕಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಕನ್ನಡಿಗರಾದ ವಿ.ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವಾಗಲೇ ರೈಲ್ವೆ ಇಲಾಖೆ ಕನ್ನಡ ವಿರೋಧಿ ನಿಲುವು ತಳೆದು ಕನ್ನಡ,‌ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡಿರುವುದು ಅತ್ಯಂತ ದುರದೃಷ್ಟಕರ.

ಸೋಮಣ್ಣನವರು ಕನ್ನಡಿಗರ ಪರವಾಗಿ ನಿಂತು ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ಭರವಸೆಯನ್ನು ನಾನೂ ಇಟ್ಟುಕೊಂಡಿದ್ದೆ, ಆ ನಂಬಿಕೆ ಹುಸಿಯಾಗಿದೆ. ಸೋಮಣ್ಣನವರು ಮಾತನಾಡಲು ಶುರು ಮಾಡಿದರೆ ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎನ್ನುವಂತೆ ಮಾತಿನ ಅರಮನೆ ಕಟ್ಟುತ್ತಾರೆ. ಅವರು ಮಾತು ಸ್ವಲ್ಪ ಕಡಿಮೆಮಾಡಿ ಕರ್ನಾಟಕಕ್ಕಾಗಿ‌ ಮಾಡಬೇಕಾದ ಕೆಲಸವನ್ನು ನಿಷ್ಠೆಯಿಂದ ಮಾಡಲು ಮುಂದಾಗಬೇಕು.

ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆ ಮೇಲೆ ಇರುವ ಪ್ರೀತಿ ಮತ್ತು ಕನ್ನಡವೂ ಸೇರಿದಂತೆ ರಾಜ್ಯಭಾಷೆಗಳ ಮೇಲೆ ಇರುವ ತಾತ್ಸಾರ ಮನೋಭಾವದ ದುಷ್ಪರಿಣಾಮವನ್ನು ಕನ್ನಡಿಗರು ಈಗಾಗಲೇ ಅನುಭವಿಸಿದ್ದಾರೆ.
ಉತ್ತರ ಭಾರತದ ಹಿಂದಿ ಭಾಷಿಗರಿಗೆ ನೆರವಾಗಬೇಕೆಂಬ ಏಕೈಕ ಉದ್ದೇಶದಿಂದ ಕೇಂದ್ರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್‌ ಗೆ ಮಾತ್ರ ಅವಕಾಶ ನೀಡುವ ಕೇಂದ್ರದ ಭಾಷಾ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲ.

ಭಾರತ ರಾಜ್ಯಗಳ ಒಕ್ಕೂಟ, ಈ ರಾಜ್ಯಗಳು ಭಾಷೆಗಳ ಆಧಾರದಲ್ಲಿಯೇ ರಚನೆಯಾಗಿರುವುದನ್ನು ಮರೆಯಬಾರದು. ನಾವು ಹಿಂದಿಯನ್ನು ಭಾಷೆಯಾಗಿ ವಿರೋಧಿಸುವುದಿಲ್ಲ, ಹಿಂದಿಯನ್ನು ಕನ್ನಡದ ಮೇಲೆ ಹೇರುವುದನ್ನು ಮಾತ್ರ ಖಂಡಿತ ಸಹಿಸುವುದಿಲ್ಲ. ಆಳುವ ಪಕ್ಷದ ಸಂಸದರು ಪಕ್ಷದ ಮುಲಾಜಿಗೆ ಬಿದ್ದು ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತದೆ ಬಾಯಿ ಮುಚ್ಚಿಕೊಂಡಿರಬಹುದು, ಆದರೆ ಕನ್ನಡಿಗರು ಜಾಗೃತರಾಗಿದ್ದಾರೆ.

ಕನ್ನಡಿಗರು ಉದ್ಯೋಗಕ್ಕಾಗಿ, ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ, ತಾವು ಶಿಕ್ಷಣ ಪಡೆದ ಭಾಷೆಯಲ್ಲೇ ತಮ್ಮ ಹಕ್ಕಿನ ಉದ್ಯೋಗ ಭಡ್ತಿಯನ್ನು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷಿಗರಿಗೆ ಭಾಷೆಯ ಹೆಸರಲ್ಲಿ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯೆಪ್ರವೇಶಿಸಿ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರದ್ದುಪಡಿಸಲಾದ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿ ಶೀಘ್ರದಲ್ಲಿಯೇ ನಡೆಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now