Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿವಿ ಸಾಗರಕ್ಕೆ ಸಿಎಂ ಬಾಗಿನ : ಪ್ರಜಾಪ್ರಭುತ್ವದ ದೊಡ್ಡ ಅಣಕ        

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 22 : ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸುದ್ದಿ ಗೋಷ್ಠಿ ನಡೆಸಿದ್ದು ಸಂಪೂರ್ಣ ವಿವರ ಈ ಕೆಳಗಿನಂತಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿಸ್ಸೀಮ ನಿರ್ಲಕ್ಷ್ಯದಿಂದಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಆಮೆ ವೇಗ ಪಡೆದಿದೆ. ಅನುದಾನ ಕೊರತೆ ಕಾರಣಕ್ಕೆ ಗುತ್ತಿಗೆದಾರರು  ಫೀಲ್ಟ್ ನಿಂದ ಹೊರ ಹೋಗಿದ್ದಾರೆ. ತುಮಕೂರು ಬ್ರಾಂಚ್ ಕಾಲುವೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದ್ದು ಮೆಷನರಿ ಸಮೇತ ಗುತ್ತಿಗೆದಾರರು ಕಾಲ್ಕಿತ್ತಿದ್ದಾರೆ. 2300 ಕೋಟಿಯಷ್ಟು  ಬೃಹತ್ ಮೊತ್ತದ ಕಾಮಗಾರಿ ಬಿಲ್ ಬಾಕಿ ಇರುವುದೇ ಪ್ರಮುಖ ಕಾರಣ. ಅನುದಾನ ಅಲಭ್ಯತೆ ಕಾರಣಕ್ಕೆ ಯೋಜನೆಯ ಇಂಜಿನಿಯರ್ ಗಳು ನಿತ್ಯ ಕಚೇರಿಗೆ ಬಂದು ಕೈ ಕಟ್ಟಿ ಕುಳಿತು ಮನೆಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಒಂದರ್ಥದಲ್ಲಿ ಕಚೇರಿ ಕಾಯುವ ವಾಚ್ ಮನ್ ಕೆಲಸ ಅವರದ್ದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿ ಸಾಗರ ಜಲಾಶಯ ಮೂರನೇ ಬಾರಿಗೆ ಭರ್ತಿಯಾದ ಹಿನ್ನಲೆಯಲ್ಲಿ ಬಾಗಿನ ಬಿಡಲು ಶುಕ್ರವಾರ  ಹಿರಿಯೂರಿಗೆ ಆಗಮಿಸುತ್ತಿದ್ದಾರೆ. ರಾಜ್ಯದ ಬಹುತೇಕ ಜಲಾಶಯಗಳು ಮಳೆಗಾಲದಲ್ಲಿ ತುಂಬಿದರೆ , ವಿವಿ ಸಾಗರ ಮಳೆ ಬಾರದ ವೇಳೆಯಲ್ಲಿ ತುಂಬಿರುವುದರ ಹಿಂದೆ ಭದ್ರಾ ಜಲಾಶಯದ ನೀರನ್ನು ಲಿಫ್ಟ್ ಮಾಡಿರುವುದೇ ಮುಖ್ಯ ಕಾರಣ. ರಾಜ್ಯ ಸರ್ಕಾರ ಸಕಾಲದಲ್ಲಿ ಹಣ ಒದಗಿಸಿದ್ದರೆ ಇಷ್ಟೊತ್ತಿಗೆ ವಿವಿ ಸಾಗರದ ಜೊತೆಗೆ ಜಿಲ್ಲೆಯ ನೂರಾರು ಕೆರೆಗಳು ಭರ್ತಿಯಾಗುವ ಭಾಗ್ಯ ಪಡೆದುಕೊಳ್ಳುತ್ತಿದ್ದವು.
ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಮೂರು ಪರಿಶಿಷ್ಟ ಪಂಗಡದ , ಎರಡು ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಸಾಲದೆಂಬಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಕೂಡಾ ಪರಿಶಿಷ್ಟ ಜಾತಿಗೆ ಮೀಸಲು ಆಗಿದೆ.

ಶೋಷಿತ ಸಮುದಾಯ ಹಾಗೂ ಅಹಿಂದ ವರ್ಗ ಪ್ರತಿನಿಧಿಸುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಶೋಷಿತರೇ ಹೆಚ್ಚು ಒಳಗೊಂಡಿರುವ ಮಧ್ಯ ಕರ್ನಾಟಕ ಪ್ರದೇಶದ ನೀರಾವರಿ ಯೋಜನೆ ನಿರ್ಲಕ್ಷ್ಯ ಮಾಡಿರುವುದು ನೋವು ತಂದಿದೆ. ಸಿದ್ದರಾಮಯ್ಯ ಅವರ ಬದ್ದತೆ ಪ್ರಶ್ನಿಸುವಂತಾಗಿದೆ.
ಕೇಂದ್ರ ಸರ್ಕಾರ  ಘೋಷಿತ 5300 ಕೋಟಿ ರು ಅನುದಾನ ನೀಡಿಲ್ಲವೆಂಬ ಸಂಗತಿಯ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಭದ್ರಾ  ಮೇಲ್ದಂಡೆಗೆ ಅನುದಾನ ವ್ಯಯ ಮಾಡಲು ಮುಂದಾಗುತ್ತಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿಕೊಂಡು  ಯೋಜನೆ ಸೊರಗಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಈ ಜನ ದ್ರೋಹದ ನಡೆಯನ್ನು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸುತ್ತದೆ.
ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಶಾಸಕರ ಬಹುದೊಡ್ಡ ದಂಡೇ ಇದೆ. ಎಲ್ಲರೂ ಕೂಡಾ ಕಾಮಗಾರಿ ವಿಷಯದಲ್ಲಿ ಇಚ್ಚಾಶಕ್ತಿ ತೋರದೆ ಅಸಹಾಯಕರಾಗಿ ಪಲಾಯನವಾದ  ಅನುಸರಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಬದ್ದತೆ ಪ್ರದರ್ಶಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಭದ್ರಾ ನೀರನ್ನು ಲಿಫ್ಟ್ ಮಾಡಿ  ವಿವಿ ಸಾಗರ ಜಲಾಶಯ ಭರ್ತಿ ಮಾಡುವ ಹಾಗೂ ಮುಖ್ಯಮಂತ್ರಿಗಳ ಕರೆಯಿಸಿ ಬಾಗಿನ ಬಿಡುವ ಸಂಭ್ರಮದಲ್ಲಿ ಮುಳುಗಿರುವುದು ಪ್ರಜಾಪ್ರಭುತ್ವದ ದೊಡ್ಡ ಅಣಕವಾಗಿದೆ.
ಗ್ಯಾರಂಟಿ  ಯೋಜನೆಗಳ ಮೂಲಕ ಅಹಿಂದ ವರ್ಗಗಳಲ್ಲಿ ಅಶಾಕಿರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಏಳನೇ ಗ್ಯಾರಂಟಿಯಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವ ಶಪಥ ಮಾಡಲಿ. 22 ಸಾವಿರ ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಇದುವರೆಗೂ 10300 ಕೋಟಿ ರುಪಾಯಿ ವ್ಯಯ ಮಾಡಿದೆ. ಇನ್ನೂ 12 ಸಾವಿರ ಕೋಟಿ ರುಪಾಯಿಯಷ್ಟು ಅನುದಾನ ಕಾಮಗಾರಿ ಪೂರ್ಣಗೊಳಿಸಲು ಬೇಕಾಗಿದೆ.
ವಿವಿ ಸಾಗರ ಜಲಾಶಯಕ್ಕೆ ಬಾಗಿನ ಬಿಡಲು ಬರುತ್ತಿರುವ ಸಿಎಂ ಸಿದ್ದರಾಮಯ್ಯ ಮೊರದಲ್ಲಿ ಹೆಚ್ಚು ಅನುದಾನ ಪೂರೈಕೆ ಹಾಗೂ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಜದನಿಯ ಇಚ್ಚಾಶಕ್ತಿಯನ್ನಿಟ್ಟು ಜಲಾರ್ಪಣೆ ಮಾಡಲಿ. ನಮ್ಮನ್ನು ಪೊರೆವ ತಾಯಿ ತುಂಗೆ, ಭದ್ರೆ, ವೇದಾವತಿ ಮಡಿಲಲ್ಲಿ ನಿಂತು ಪೊಳ್ಳುತನ, ಹುಸಿ ಭರವಸೆ ಬಾಗಿನ ಬಿಡುವ ಪ್ರದರ್ಶನ ಮಾಡಬಾರದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸುತ್ತದೆ.

ಸುದ್ದಿ ಗೋಷ್ಠಿಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಜೆ.ಯಾದವರೆಡ್ಡಿ, ಸಿಪಿಐನ  ಸುರೇಶ್ ಬಾಬು, ಬಸ್ತಿಹಳ್ಳಿ ಸುರೇಶ್ ಬಾಬು,  ಹಂಪಯ್ಯನಮಾಳಿಗೆ ಧನಂಜಯ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment