ಸುದ್ದಿಒನ್, ಚಿತ್ರದುರ್ಗ, (ಫೆ.03) : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಮಹೋತ್ಸವವು ಮಘ ನಕ್ಷತ್ರದ ಶುಭ ಮುಹೂರ್ತದಲ್ಲಿ ಶ್ರದ್ಧಾ ಭಕ್ತಿಗಳಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ವಿಜೃಂಭಣೆಯಿಂದ ಮಂಗಳವಾರ ಬೆಳಿಗ್ಗೆ ನೆರವೇರಿತು.
ಇಂದು (ಫೆ. 03, ಮಂಗಳವಾರ) ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿಶೇಷ ಪೂಜೆ ನೆರವೇರಿಸಿ, ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತಂದು ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತೇರಿಗೆ ದೊಡ್ಡ ಗಾತ್ರದ ಹೂವಿನ ಹಾರ ಮತ್ತು ಬಾವುಟಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿದ ನಂತರ ತೆಂಗಿನಕಾಯಿ ಹೊಡೆದು ನೆರೆದಿದ್ದ ಭಕ್ತ ಸಮೂಹ ಭಕ್ತಿ ಸಮರ್ಪಿಸಿದರು. ಈ ವೇಳೆ ದೇವರಿಗೆ ಹಾಕಿದ್ದ ಹಾರಗಳ ಹರಾಜು ಪ್ರಕ್ರಿಯೆಯಲ್ಲಿ
ಮೊದಲನೆಯ ಹಾರವನ್ನು ಕಮ್ಮಾರ್ ಶಿವಮೂರ್ತಿ ಅವರು 31000 ರೂಪಾಯಿಗಳಿಗೆ
ಎರಡನೆಯ ಹಾರವನ್ನು ಹಾರೆ ರಘು 16000
ರೂಪಾಯಿಗಳಿಗೆ
ಮೂರನೆಯ ಹಾರವನ್ನು ಅಂಜನಾ ಸಾನಿಕಂ 10000
ರೂಪಾಯಿಗಳಿಗೆ
ನಾಲ್ಕನೆಯ ಹಾರವನ್ನು ಸಾನಿಕಂ ಸುಲೋಚನಮ್ಮನವರು 7000 ರೂಪಾಯಿಗಳಿಗೆ
ಐದನೆಯ ಹಾರವನ್ನು ಲೊಡಗಪ್ಪನವರ ಸುಧಾಕರ್ 5000 ರೂಪಾಯಿಗಳಿಗೆ ಗಳಿಗೆ ಪಡೆದು ಭಕ್ತಿ ಸಮರ್ಪಿಸಿದರು.
ಇದೇ ವೇಳೆ ದೇವಸ್ಥಾನದ ಅಭಿವೃದ್ಧಿಗಾಗಿ
ದಿವಂಗತ ಇಂಟೂರು ಶ್ರೀಮತಿ ಹರಿಣಾಕ್ಷಮ್ಮ ಮತ್ತು ಹನುಮಂತ ರೆಡ್ಡಿ ಮತ್ತು ಅವರ ಮಕ್ಕಳಾದ ಶೇಷಾದ್ರಿರೆಡ್ಡಿ ಮತ್ತು ಸಹೋದರರು 50000 ರೂಪಾಯಿಗಳನ್ನು,
ಕಜ್ಜಿ ಗೊರಪ್ಪನವರ ಮೊಮ್ಮಗ ಕಜ್ಜಿ ತಿಪ್ಪೇಸ್ವಾಮಿಯವರು 50000 ರೂಪಾಯಿಗಳನ್ನು ಮತ್ತು
ಟೈಲರ್ ಹನುಮಂತಪ್ಪನವರ ಮಗ ಓಂಕಾರಪ್ಪ ನವರಿಂದ 50000 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ.
ಬೆಳಿಗ್ಗೆ 10 ಗಂಟೆಗೆ ತೇರನ್ನು ಸಾವಿರಾರು ಭಕ್ತರು ಎಳೆದು ಸಂಭ್ರಮಿಸಿದರು. ಅಡವಿ ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ತೇರನ್ನು ಎಳೆದರು.
ಮುಜರಾಯಿ ಇಲಾಖೆಯ ಬಸವರಾಜ್ ಕಲಾತಂಡದವರಿಂದ ಶಹನಾಯಿ, ಡೋಲು, ಕರಡಿವಾಲಗ,
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಮೀಪದ ಸಿಂಗೇನಹಳ್ಳಿಯ ವೀರಗಾಸೆ ಕಲಾ ತಂಡ,
ಚಿತ್ರದುರ್ಗದ ಶ್ರೀ ಏಕನಾಥೇಶ್ವರೀ ಜಾನಪದ ತಾಷಾರಾಮ್ ಡೋಲ್ ಕಲಾ ತಂಡದ ಡೊಳ್ಳು ಕುಣಿತ ಸೇರಿದಂತೆ ಇತರೆ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಆಂಜನೇಯ ಸ್ವಾಮಿ ರಥೋತ್ಸವದ ವಿಡಿಯೋ
ಭಕ್ತರು ತೇರಿಗೆ ಬಾಳೆ ಹಣ್ಣು ಎಸೆದ ಭಕ್ತಿ ಭಾವ ಸಮರ್ಪಿಸಿದರು. ತುರುವನೂರು, ಕೂನಬೇವು, ಬೆಳಗಟ್ಟ, ದೊಡ್ಡಘಟ್ಟ, ಕಡಬನಕಟ್ಟೆ, ಮುಸ್ಟೂರು, ಬಂಗಾರಕ್ಕನಹಳ್ಳಿ, ಹವಳೇನಹಳ್ಳಿ, ಚಿಕ್ಕಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕಾಯಿ-ಕರ್ಪೂರ, ಮುಡಿಪು ಸಮರ್ಪಿಸಿದರು. ಭಕ್ತರಿಗೆ ದೇವಾಲಯ ಸಮಿತಿಯಿಂದ ಪ್ರಸಾದ ವಿವರಿಸಿದರು.
ತೇರು ಮತ್ತು ದೇವಸ್ಥಾನದ ಮುಂದೆ ನಿಂತು ಭಕ್ತರು ಮೊಬೈಲ್ ನಲ್ಲಿ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸಿದರು.ಮುಂಜಾಗ್ರತೆ ಕ್ರಮವಾಗಿ ಜಾತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ದಾಸಪ್ಪನ ಪವಾಡ : ದಾಸಪ್ಪನವರಾದ ಪ್ರಜ್ವಲ್ ರವರು ಮುರುಡಪ್ಪನವರಾಗಿ ಎರಡನೇ ವರ್ಷ ಭಕ್ತರಿಗೆ ದರ್ಶನ ನೀಡಲಿದ್ದಾರೆ.
ಶ್ರೀ ಆಂಜನೇಯ ತೇರು ಎಳೆದ ಮೇಲೆ ಮಧ್ಯಾಹ್ನ 2:30 ರ ವೇಳೆಗೆ ಮುರುಡಪ್ಪನನ್ನು ಆತನ ಮನೆಯಲ್ಲಿ ಹೂವುಗಳಿಂದ ಅಲಂಕರಿಸಿ ಕಾಲಿಗೆ ಗಗ್ಗರ ತೊಡಿಸಿ ಗೋವಿಂದನ ನಾಮ ಸ್ಮರಣೆ, ಮಂಗಳ ವಾದ್ಯಗಳೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಅಡವಿ ಹನುಮಂತರಾಯ ದೇವಸ್ಥಾನ ಮತ್ತು ಭೂತನಾಥನಿಗೆ ವಂದಿಸಿ ಊರಿನ ಪೂರ್ವ ದಿಕ್ಕಿನಲ್ಲಿರುವ ದೊಡ್ಡಘಟ್ಟದ ಕೆರೆ ಬಳಿಯ ಉಗ್ರನರಸಿಂಹ ಸ್ವಾಮಿಯ ದೇವಸ್ಥಾನದ ವರೆಗೂ ಕಾಲ್ನಡಿಗೆಯಲ್ಲೇ ನಡೆದು ಹೋಗಿ ಸೂರ್ಯಾಸ್ತಮಾನ ಆಗುವ ಮೊದಲೇ ಉಗ್ರನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಮುಳ್ಳಿನ ಪಲ್ಲಕ್ಕಿ ಪವಾಡ ಅಲ್ಲಿಂದ ವಾಪಾಸು ಕಾಲ್ನಡಿಗೆಯಲ್ಲಿ ತುರುವನೂರಿನ ಅಡವಿ ದೇವಸ್ಥಾನದ ಬಳಿ ಇರುವ ಭೂತನಾಥನ ಆಶ್ರಯದಲ್ಲಿ ಸ್ಪಲ್ಪ ಕಾಲ ವಿರಮಿಸಿ ಸೂರ‍್ಯನು ಅಸ್ತಮಿಸಿದ ಮೂರು ಗಂಟೆಗಳ ಬಳಿಕ ಆ ಸ್ಥಳದಲ್ಲಿ ಗೋವಿಂದ ನಾಮಗಳಿಂದ ಸ್ಮರಿಸುತ್ತಿದ್ದಂತೆ ಪುನಃ ಪವಾಡ ನಡೆಯುತ್ತದೆ.
ಶ್ರೀ ನರಸಿಂಹಸ್ವಾಮಿ ಹಾಗೂ ಆಂಜನೇಯನ ಪ್ರವೇಶದಿಂದ ದಾಸಪ್ಪ ಪವಾಡ ಪುರಷನಾಗುತ್ತಾನೆ ಹೀಗಾಗಿ ಮುಳ್ಳಪಲ್ಲಕ್ಕಿಯಲ್ಲಿ ಸೊಪ್ಪಿನ ಪತ್ರೆ ಹರಡಿ ಅದರ ಮೇಲೆ ಮುರುಡಪ್ಪನನ್ನು ಮಲಗಿಸಿ ಮೆರವಣಿಗೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಅಂದರೆ ಇದರಿಂದ ಎಲ್ಲ ದುಷ್ಟಶಕ್ತಿಗಳು ತೊಲಗಲಿ ಎಂದು ಆ ನಂತರ ಮೆರವಣಿಗೆ ಮುಗಿಯುತ್ತಿದ್ದಂತೆ ಮಧ್ಯರಾತ್ರಿ ದೇವಸ್ಥಾನದಲ್ಲಿ ತುಂಬಿಸಿಕೊಳ್ಳಬೇಕು. ಆಗ ಆಂಜನೇಯ ಮೂಲಸ್ವರೂಪದಲ್ಲಿ ಲೀನವಾಗುತ್ತಾನೆ. ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಪವಾಡ ಇದು.
ಇನ್ನೂ ದೇವಸ್ಥಾನದಲ್ಲಿಯೇ ಮನೆಯಿಂದ ಬಂದ ಹಾಲು, ಅನ್ನ, ಮೊಸರಿನ ಪ್ರಸಾದ ಸ್ವೀಕರಿಸಿ ಉಪವಾಸ ಕೈಬಿಡುತ್ತಾರೆ. ಮರುದಿನ ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸುತ್ತಾರೆ .ಇದಾದ ನಂತರ ರಥೋತ್ಸವದ ಎರಡನೇ ದಿನ ಓಕುಳಿ ದಿನ ಮಂಗಳವಾದ್ಯಗಳೊಂದಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕಲ್ಲೇಶ್ವರ ಸ್ವಾಮಿಯ ಎರಡೂ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಗಂಗಾಪೂಜೆಗೆ ಬಾವಿಗೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ತುರುವಪ್ಪ ಬೇಟೆ ರಂಗಪ್ಪ ದೇವರಿಗೆ ಪೂಜೆಸಲ್ಲಿಸಿ ಅಲ್ಲಿಂದ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ಕಲ್ಲೇಶ್ವರ ಮೂರ್ತಿಯನ್ನು ಗುಡಿತುಂಬಿಸುತ್ತಾರೆ. ಹಾಗೆಯೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿ ಮೂರ್ತಿಯನ್ನು ಗುಡಿತುಂಬಿಸಲಾಗುತ್ತದೆ ಅಲ್ಲಿಗೆ ಆಂಜನೇಯ ಸ್ವಾಮಿ ಉತ್ಸವ ಮುಗಿಯುತ್ತದೆ.




