ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 15 : ನಗರದ ಬ್ಯಾಂಕ್ ಕಾಲೋನಿ ನಿವಾಸಿ ಹಾಗೂ ವಿಜಯನಗರ ಜಿಲ್ಲೆಯ DCRE ಘಟಕದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಘುನಾಥ್ ಅವರು ಇಂದು ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರಜೆಯನ್ನ ಆನಂದದಿಂದ ಕುಟುಂಬಸ್ಥರೊಂದಿಗೆ ಕಳೆದಿದ್ದ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಇಂದು ಇಲ್ಲ. ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬೆಳಗ್ಗೆವರೆಗೂ ಜೊತೆಗಿದ್ದ ಜೀವ ಇದ್ದಕ್ಕಿದ್ದ ಹಾಗೇ ಸತ್ತು ಹೋದರು ಅಂದ್ರೆ ಅವರನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಎಂಥ ಆಘಾತವಾಗಿರಬೇಡ. ಇಂಥದ್ದೊಂದು ಘಟನೆ ನಡೆದಿರೋದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಗಡಿ ಭಾಗದ ಕಡಬನಕಟ್ಟೆ ಗಡಿ ಭಾಗದಲ್ಲಿ ಇಂದು ಮಧ್ಯಾನ್ಹ ಸುಮಾರು 3 : 30 ರ ವೇಳೆಗೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ರಘುನಾಥ್ ನಿಧನರಾಗಿದ್ದಾರೆ.

ಮೃತ ರಘುನಾಥ್, ಚಿತ್ರದುರ್ಗ ತಾಲೂಕಿನ ನಂದಿಹಳ್ಳಿ ಗ್ರಾಮದವರು. ವಿಜಯನಗರ ಜಿಲ್ಲೆಯ DCRE ಘಟಕದಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ನೇ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಚಿತ್ರದುರ್ಗ ನಗರದ ಬಡಾವಣೆ ಮತ್ತು ಸಂಚಾರ ವಿಭಾಗದಲ್ಲಿ ಕೆಲಸ ಮಾಡಿದ್ದರು. ಚಿತ್ರದುರ್ಗದಿಂದ ಹೊಸಪೇಟೆಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ.
ಮೂರು ದಿನಗಳ ರಜೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಬಂದಿದ್ದ ರಘುನಾಥ್, ಪತ್ನಿಯ ತವರೂರಾದ ತಾಲ್ಲೂಕಿನ ಹಾಯ್ಕಲ್ ಗ್ರಾಮದಿಂದ ಕೊಪ್ಪಳ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಡಬನಕಟ್ಟೆ ಹತ್ತಿರ ತಾವೇ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ರಘುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಜೆಯಲ್ಲಿ ಕುಟುಂಬಸ್ಥರ ಜೊತೆಗೆ ಅಷ್ಟು ಖುಷಿ ಖುಷಿಯಾಗಿ ಓಡಾಡಿದ್ದ ಜೀವ ಇಂದು ಇಲ್ಲ ಅಂದ್ರೆ ಆ ಕುಟುಂಬಸ್ಥರು ಅದನ್ನ ಅರಗಿಸಿಕೊಳ್ಳೋದಕ್ಕಾದರೂ ಸಾಧ್ಯನಾ.
ಒಬ್ಬ ನಿಷ್ಠಾವಂತ ಹಾಗೂ ದಕ್ಷ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯಲ್ಲಿ ಕಂಬನಿ ಮಿಡಿದಿದ್ದಾರೆ. ಹಲವು ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












