ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ತಾಲ್ಲೂಕಿನ ತುರುವನೂರು ಗ್ರಾಮದ ಪ್ರಭಾವಿ ರಾಜಕೀಯ ಧುರೀಣರು, ಮುತ್ಸದ್ದಯೂ ಆಗಿದ್ದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವಿರಶೈವ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ ಎನ್. ತಿಪ್ಪಣ್ಣ ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಇವರಿಗೆ 97 ವರ್ಷ ವಯಸ್ಸಾಗಿತ್ತು. ಅಂತ್ಯಕ್ರಿಯೆ ನಾಳೆ ಶನಿವಾರ ತುರವನೂರಿನಲ್ಲಿ ನಡೆಸಲಿದ್ದಾರೆ. ಇಂದು ಬಳ್ಳಾರಿಯ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ತಿಪ್ಪಣ್ಣ ಅವರು ಹಲವು ವರ್ಷಗಳ ಕಾಲ ವಕೀಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಅವರು, ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ವಿರೋಧ ಪಕ್ಷದ ಉಪ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಪ ಅವಧಿಗೆ ಸಭಾಪತಿಯಾಗಿ ಕೆಲಸ ಮಾಡಿದ್ದಾರೆ. ರಾಮಕೃಷ್ಣ ಹೆಗಡೆ ಅವರೊಂದಿಗೆ ಗುರುತಿಸಿಕೊಂಡಿದ್ದ ತಿಪ್ಪಣ್ಣ, ಜನತಾದಳದಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ ಜೆಡಿಯುನಲ್ಲಿ ಇದ್ದ ಅವರು ಪಕ್ಷವನ್ನು ಜೆಡಿಎಸ್‌ನಲ್ಲಿ ವಿಲೀನಗೊಳಿಸಿದರು. ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
2012ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ತಿಪ್ಪಣ್ಣ ಆಯ್ಕೆಯಾಗಿದ್ದರು. ಇದಕ್ಕೂ ಹಿಂದೆಯೂ ಅವರು ಮಹಾಸಭಾದ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿದ್ದರು. ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷ ಹಾಗೂ ಇನ್ನಿತರ ಹುದ್ದೆಗಳಲ್ಲಿ ಅವರು 20 ವರ್ಷ ಕೆಲಸ ಮಾಡಿದ್ದಾರೆ.
ಇಂದು ನಿಧನರಾಗಿದ್ದು, ಒಬ್ಬ ಪುತ್ರನನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಕುಟುಂಬಸ್ಥರು ದುಃಖಿತರಾಗಿದ್ದಾರೆ. ಆಪ್ತರು, ಬೆಂಬಲಿಗರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












