ಚಿತ್ರದುರ್ಗ. ನ.23: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಇದೇ ನವೆಂಬರ್ 25ರಂದು ಜಿಲ್ಲೆಯಾದ್ಯಂತ ಏಳು ಸ್ಥಳಗಳಲ್ಲಿ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಜಿಲ್ಲಾ ಆಸ್ಪತ್ರೆ), ಚಿತ್ರದುರ್ಗದ ಚಳ್ಳಕೆರೆ ರಸ್ತೆಯ ರೋಟರಿ ಸೇವಾ ಭವನ, ಹಿರಿಯೂರಿನ ರಾಷ್ಟ್ರೀಯ ಅಕಾಡೆಮಿ ಶಾಲೆ, ಹೊಳಲ್ಕೆರೆ ತಾಲ್ಲೂಕು ಶಿವಪುರದ ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸದುರ್ಗ ಹಾಗೂ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗಳು ಮತ್ತು ಮೊಳಕಾಲ್ಮುರು ತಾಲ್ಲೂಕು ಕೊಂಡ್ಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿಬಿರಗಳು ನಡೆಯಲಿವೆ.

18 ರಿಂದ 45 ವರ್ಷದೊಳಗಿನ, ಕನಿಷ್ಠ 45 ಕೆ.ಜಿ. ತೂಕ ಹಾಗೂ 12.5ಕ್ಕಿಂತ ಹೆಚ್ಚಿನ ಹಿಮೊಗ್ಲೋಬಿನ್ ಹೊಂದಿರುವ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ರಕ್ತದಾನ ಮಾಡಬಹುದು. ಪುರುಷರು ಮೂರು ತಿಂಗಳಿಗೊಮ್ಮೆ ಮತ್ತು ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತ ನೀಡಬಹುದು.
ರಕ್ತದಾನದಿಂದ ಹೃದಯ ಸಂಬಂಧಿ ತೊಂದರೆಗಳು ಕಡಿಮೆಯಾಗುತ್ತವೆ. ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಅನಗತ್ಯ ಕೊಲೆಸ್ಟ್ರಾಲ್ ಇಳಿಕೆಯಾಗುತ್ತದೆ, ದೇಹಕ್ಕೆ ಮರುಚೈತನ್ಯ ಸಿಗುತ್ತದೆ ಮತ್ತು ಉಚಿತ ರಕ್ತ ಪರೀಕ್ಷೆ ಲಭ್ಯವಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ನಾಲ್ಕು ಜನರ ಜೀವ ಉಳಿಸಿದ ಆತ್ಮಸಂತೋಷ ಸಿಗುತ್ತದೆ.
ಉದ್ಘಾಟನಾ ಕಾರ್ಯಕ್ರಮ: ಹಿರಿಯೂರಿನ ರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ನಡೆಯುವ ಶಿಬಿರವನ್ನು ಪರಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಉದ್ಘಾಟಿಸುವರು. ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ, ಸಂಘ-ಸಂಸ್ಥೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿ.ಪಂ. ಸಿಇಒ ಡಾ. ಎಸ್. ಆಕಾಶ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.







