Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

---Advertisement---

 

ಚಿತ್ರದುರ್ಗ. ನ.23: ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಡಿಯಲ್ಲಿ ಬರುವ ಈಡಿಗ ಹಾಗೂ ಅದರ ಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನ.

ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ ರೂ.2.00 ಲಕ್ಷ ಆರ್ಥಿಕ ನೆರವು ದೊರೆಯಲಿದೆ. ರೂ.1.00 ಲಕ್ಷದವರೆಗಿನ ಸಾಲಕ್ಕೆ ಶೇ.20 (ಗರಿಷ್ಠ ರೂ.20,000) ಮತ್ತು ರೂ.1.01 ಲಕ್ಷದಿಂದ ರೂ.2.00 ಲಕ್ಷದವರೆಗೆ ಶೇ.15 (ಕನಿಷ್ಠ ರೂ20,000, ಗರಿಷ್ಠ ರೂ.30,000) ಸಹಾಯಧನವಿದ್ದು, ಉಳಿಕೆ ಮೊತ್ತಕ್ಕೆ ಶೇ.4 ಬಡ್ಡಿದರ ಅನ್ವಯಿಸುತ್ತದೆ. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.

ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ವೈಯಕ್ತಿಕ ಕೊಳವೆ ಬಾವಿ ಘಟಕಕ್ಕೆ ರೂ.3.25 ಲಕ್ಷ (ಸಹಾಯಧನ ಹಾಗೂ ಸಾಲ ಸೇರಿ) ನಿಗದಿಯಾಗಿದ್ದು, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000 ಸಾಲವನ್ನು ಶೇ.4 ಬಡ್ಡಿದರದಲ್ಲಿ ನೀಡಲಾಗುತ್ತದೆ. ಕನಿಷ್ಠ 2 ಎಕರೆ, ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.

ಅರಿವು-ಶೈಕ್ಷಣಿಕ ಸಾಲ ಯೋಜನೆಯಡಿ ಸಿಇಟಿ, ನೀಟ್ ಮೂಲಕ ಆಯ್ಕೆಯಾಗಿ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಗೆ ವಾರ್ಷಿಕ ರೂ.1 ಲಕ್ಷದಂತೆ ಗರಿಷ್ಠ ರೂ.4 ಲಕ್ಷದಿಂದ ರೂ.5 ಲಕ್ಷದವರೆಗೆ ವಾರ್ಷಿಕ ಶೇ.2 ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ. ಅಭ್ಯರ್ಥಿ ಮತ್ತು ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷದ ಒಳಗಿರಬೇಕು.

ಸ್ವಾವಲಂಬಿ ಸಾರಥಿ ಯೋಜನೆಯಡಿ ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಬ್ಯಾಂಕ್‍ನಿಂದ ಪಡೆಯುವ ಸಾಲಕ್ಕೆ ಶೇ.50 ಅಥವಾ ಗರಿಷ್ಠ ರೂ.3.00 ಲಕ್ಷ ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರ ವಯಸ್ಸು 21 ರಿಂದ 45 ವರ್ಷದೊಳಗಿದ್ದು, ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಶೈಕ್ಷಣಿಕ ಸಾಲ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರಕ್ಕೆ ರೂ.98,000 ಮತ್ತು ಪಟ್ಟಣಕ್ಕೆ ರೂ.1,20,000 ಮಿತಿಯಲ್ಲಿರಬೇಕು.

ಆಸಕ್ತರು ಸೇವಾ ಸಿಂಧು ಫೋರ್ಟಲ್ http://sevasindhu.karnataka.gov.in ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಡಿಸೆಂಬರ್ 16, 2026 ರೊಳಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ನಿಗಮದ ಯಾವುದೇ ಯೋಜನೆಯಲ್ಲಿ ಈ ಹಿಂದೆ ಪ್ರಯೋಜನ ಪಡೆದಿದ್ದರೆ ಅಂತಹವರು ಮತ್ತು ಅವರ ಕುಟುಂಬದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ https://bcwd.karnataka.gov.in/sngdc/public ಜಾಲತಾಣ, ಸಹಾಯವಾಣಿ 080-22374832, 8050770004, 8050770005 ಅಥವಾ ಚಿತ್ರದುರ್ಗ ಜಿಲ್ಲಾ ಕಚೇರಿ ದೂರವಾಣಿ 08194-220882 ಸಂಪರ್ಕಿಸಬಹುದು ಎಂದು ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ಚಿತ್ರದುರ್ಗ ಜಿಲ್ಲಾ ವ್ಯವಸ್ಥಾಪಕ ಹೆಚ್.ಸಿ.ಸಾತ್ವಿಕ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now