ಚಿತ್ರದುರ್ಗ. ನ.23: ಕರ್ನಾಟಕ ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನಲ್ಲಿ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನ.
ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ ಅಡಿಯಲ್ಲಿ ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ.2 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ರೂ.1 ಲಕ್ಷದವರೆಗಿನ ಸಾಲದಲ್ಲಿ ಶೇ.20 (ಗರಿಷ್ಠ ರೂ.20,000) ಹಾಗೂ ರೂ.1.01 ಲಕ್ಷದಿಂದ ರೂ.2.00 ಲಕ್ಷದವರೆಗೆ ಶೇ.15 (ಗರಿಷ್ಠ ರೂ.30,000) ಸಹಾಯಧನ ಲಭ್ಯವಿದ್ದು, ಉಳಿಕೆ ಮೊತ್ತಕ್ಕೆ ಶೇ.4ರ ಬಡ್ಡಿದರದಲ್ಲಿ ನೇರ ಸಾಲ ಸೌಲಭ್ಯ ದೊರೆಯುತ್ತದೆ. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ಮಿತಿ ಗ್ರಾಮಾಂತರ ಪ್ರದೇಶದವರಿಗೆ ರೂ.98,000 ಮತ್ತು ಪಟ್ಟಣ ಪ್ರದೇಶದವರಿಗೆ ರೂ.1,20,000 ನಿಗದಿಪಡಿಸಲಾಗಿದೆ.
ಅರಿವು-ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಸಿಇಟಿ, ನೀಟ್ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯಾಗಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತಿತರ 28 ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1 ಲಕ್ಷದಂತೆ ಕೋರ್ಸ್ ಅವಧಿಗೆ ಗರಿಷ್ಠ ರೂ.4.00 ಲಕ್ಷದಿಂದ ರೂ.5 ಲಕ್ಷದವರೆಗೆ ಶೇ.2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಅಭ್ಯರ್ಥಿ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.3.50 ಲಕ್ಷದೊಳಗಿರಬೇಕು.
ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಬ್ಯಾಂಕ್ ಸಾಲದ ಮೇಲೆ ಶೇ.50ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷ ಸಹಾಯಧನ ನೀಡಲಾಗುತ್ತದೆ. ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು ಹಾಗೂ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ವಾರ್ಷಿಕ ಆದಾಯ ಮಿತಿ ಗ್ರಾಮಾಂತರ ಪ್ರದೇಶದವರಿಗೆ ರೂ.98,000 ಮತ್ತು ಪಟ್ಟಣ ಪ್ರದೇಶದವರಿಗೆ ರೂ.1,20,000 ನಿಗದಿಯಾಗಿದೆ.

ಈ ಎಲ್ಲಾ ಯೋಜನೆಗಳು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಡಿಯ 6(ಚಿ)ಯಿಂದ 6(q)ವರೆಗಿನ ಕುಂಬಾರ, ಚಕ್ರಸಾಲಿ, ಗುಣಗ, ಗಣಿಗ, ಕೊಯವ, ಕುಲ, ಕುಲಾಲ, ಕುಂಬಾರ್, ಕುಂಬಾರ್ಡ್, ಕುಮ್ಮಾರ, ಕುಸವನ್, ಮೂಲ್ಯ, ಸಜ್ಜನ್ ಕುಂಬಾರ, ಖುಮಾರ, ಕುಂಭಾರ, ಖುಂಭಾರ ಮತ್ತು ಕುಲಾಲರ್ ಸಮುದಾಯದವರಿಗೆ ಅನ್ವಯಿಸುತ್ತವೆ. ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗೂ ದಾಖಲೆಗಳಲ್ಲಿ ಹೆಸರು ಹೊಂದಾಣಿಕೆಯಾಗಬೇಕು. ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಅಥವಾ ಅವರ ಕುಟುಂಬದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಆಸಕ್ತರು ಸೇವಾ ಸಿಂಧು ಪೋರ್ಟಲ್ http://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ನಿಗಮದ ಜಾಲತಾಣ bcwd.karnataka.gov.in/kumbaradc/public/ ಅಥವಾ ಸಹಾಯವಾಣಿ ಸಂಖ್ಯೆ 080-22374832, 8050770004, 8050770005 ಹಾಗೂ ಚಿತ್ರದುರ್ಗ ಜಿಲ್ಲಾ ಕಚೇರಿ ದೂರವಾಣಿ 08194-220882 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಹೆಚ್.ಸಿ.ಸಾತ್ವಿಕ್ ತಿಳಿಸಿದ್ದಾರೆ.






