ಸುದ್ದಿಒನ್, ಚಿತ್ರದುರ್ಗ, ಜುಲೈ. 27 : ಬಣ್ಣಬಣ್ಣದ ಗಾಳಿಪಟಗಳು ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಬಂದಿದ್ದ ಮಕ್ಕಳ ಮನಸ್ಸಿಗೆ ಹಾಗೂ ಪೋಷಕರಿಗೆ ರೋಮಾಂಚನ ಮತ್ತು ಖುಷಿ ನೀಡುತ್ತಿದ್ದುದು ನಗರದ ರೈಲ್ವೇ ಸ್ಟೇಷನ್ ಬಡಾವಣೆಯ ಅಹಲ್ಯಾ ವಿದ್ಯಾಮಂದಿರದ ಸಮಗ್ರ ಶಿಶುಶಿಕ್ಷಣ ಕೇಂದ್ರದಿಂದ ಭಾನುವಾರದಂದು ನಡೆದ ಗಾಳಿಪಟ ಹಬ್ಬದಲ್ಲಿ ಕಂಡು ಬಂದಿತು. ಉತ್ಸವದಲ್ಲಿ ಮಕ್ಕಳಿಗೆ ಯಾವುದೇ ಕೆಲಸವನ್ನು ನೇರವಾಗಿ ಮಾಡು ಎಂದು ಹೇಳುವುದಕ್ಕಿಂತ ನಾವು ಮಾಡುವ ಮತ್ತು ಅನುಸರಿಸುವ ಕೆಲಸಗಳು ಮಕ್ಕಳಿಗೆ ಮಾರ್ಗದರ್ಶನವಾಗಬೇಕೇ ಹೊರತು ಕೇವಲ ಹೇಳಿಕೆಗಳಾಗಬಾರದು ಎಂದು ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ಯೋಗ ಚಿಕಿತ್ಸಕ ಎಂ.ಬಿ.ಮುರುಳಿ ಸಲಹೆ ನೀಡಿದರು.
ಧ್ಯಾನದ ಪ್ರಾತ್ಯಕ್ಷಿಕೆ ಮೂಲಕ ಪೋಷಕರು ಅನುಸರಿಸುವ ಮಾರ್ಗವನ್ನು ಮಕ್ಕಳು ಯಾವ ರೀತಿ ಅನುಸರಿಸುತ್ತಾರೆ ಎಂಬುದನ್ನು ತಿಳಿಸಿಕೊಟ್ಟರು. ಗಾಳಿಪಟ ಉತ್ಸವವು ಉತ್ತರಾಯಣ ಕಾಲದಲ್ಲಿ ಆಚರಿಸಲ್ಪಡುವ ನಮ್ಮ ದೇಶದ ಸಾಂಸ್ಕøತಿಕ ಹಬ್ಬವಾಗಿದ್ದು ಗಾಳಿಪಟ ಉತ್ಸವಕ್ಕೆ ಕ್ರಿ.ಪೂ.200 ವರ್ಷಗಳ ಇತಿಹಾಸವಿರುವುದು ತಿಳಿದುಬರುತ್ತದೆ. ಈ ಉತ್ಸವವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಂತಹ ಉತ್ಸವವಾಗಿದ್ದು, ಪ್ರತಿವರ್ಷ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಈ ಉತ್ಸವವನ್ನು ಆಚರಿಸುತ್ತಾರೆ. ಅಂತೆಯೇ ಅನೇಕ ದೇಶಗಳಲ್ಲಿ ಇದರ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಗಾಳಿಪಟ ಹಬ್ಬವು ನಮ್ಮ ಸಂಸ್ಕøತಿ, ಮನರಂಜನೆ ಹಾಗೂ ಸಂಬಂಧಗಳ ಪ್ರತೀಕವಾಗಿದೆ ಎಂದು ತಿಳಿದರು.

ದಾವಣಗೆರೆಯ ಬಾಪೂಜಿ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿ ಜಿ.ಎಸ್.ಸಿದ್ಧಾರ್ಥ ಮಾತನಾಡಿ, ಮಕ್ಕಳ ಬೌದ್ಧಿಕ ಬೆಳವಣಿಗೆಯು ಮೂರನೇ ವರ್ಷದಿಂದ ಎಂಟು ವರ್ಷಗಳವರೆಗೆ ಸಾಕಷ್ಟು ಬೆಳೆಯುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಮಾಡುವ ಚಟುವಟಿಕೆಗಳಲ್ಲಿ ಪೋಷಕರು ಪ್ರೋತ್ಸಾಹಿಸಬೇಕೇ ಹೊರತು ನಿರ್ಬಂಧಗಳನ್ನು ಹೇರಬಾರದು ಮತ್ತು ಅವರು ಮಾಡುವ ಕೆಲಸಗಳಿಗೆ ಪ್ರೋತ್ಸಾಹ ಮತ್ತು ಅಭಿನಂದನೆಗಳನ್ನು ತಿಳಿಸಬೇಕು. ಇದರಿಂದ ಮಕ್ಕಳ ಮಾನಸಿಕ ಸಾಮಥ್ರ್ಯ ಹೆಚ್ಚಾಗಿ ತಾವು ಮಾಡುವ ಕೆಲಗಳಲ್ಲಿ ವಿಶ್ವಾಸಾರ್ಹತೆ ಹೆಚ್ಚುತ್ತದೆ, ಇದರಿಂದ ಮಕ್ಕಳು ತಪ್ಪು ಕೆಲಸಗಳನ್ನು ಮಾಡದೆ, ತಾವು ಮಾಡುವ ಕೆಲಸಗಳನ್ನು ಆತ್ಮವಿಶ್ವಾಸದಿಂದ ಮಾಡುತ್ತವೆ ಎಂದರು. ಮಕ್ಕಳ ಮುಂದೆ ಪೋಷಕರಾದಂತಹವರು ಹೊಂದಾಣಿಕೆಯಿಂದ ನಡೆದುಕೊಳ್ಳಬೇಕೆಂದು ಸಲಹೆಯನ್ನು ನೀಡಿದರು.
ಅಹಲ್ಯಾ ವಿದ್ಯಾಮಂದಿರದ ಮುಖ್ಯಶಿಕ್ಷಕಿ ಶ್ರೀಮತಿ ಸರಸ್ಡತಿ ಮಾತಾಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕøತಿಕ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸುನಿತಮುರುಳಿ, ನಿಖಿತ ಮಾತಾಜಿ, ತಸ್ಲಿಮ್ ಮಾತಾಜಿ, ಪೋಷಕರು ಹಾಗು ಮಕ್ಕಳು ಉಪಸ್ಥಿತರಿದ್ದರು. ಶ್ರೀಮತಿ ರೇಣುಕಾ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿ ಸ್ಡಾಗತಿಸಿ, ವಂದಿಸಿದರು.












