ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಜುಲೈ. 28 : ಗ್ರಾಮ ಪಂಚಾಯಿತಿ ನೌಕರರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕಾರ್ಮಿಕ ಇಲಾಖೆ ಅಧಿಕಾರಿ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಕಾರ್ಮಿಕ ಇಲಾಖೆಗೆ ತೆರಳಿದ ಪ್ರತಿಭಟನಾಕಾರರು ಕನಿಷ್ಠ ವೇತನ ನೀಡದ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಸಿಐಟಿಯು.ಜಿಲ್ಲಾ ಸಂಚಾಲಕಿ ಎನ್.ನಿಂಗಮ್ಮ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಗ್ರಾಮ ಪಂಚಾಯಿತಿ ನೌಕರರಿಗೆ ತಿಂಗಳಿಗೆ 36 ಸಾವಿರ ರೂ.ಗಳ ವೇತನ ನಿಗಧಿಪಡಿಸಿ ಪ್ರತಿ ತಿಂಗಳು ಐದನೆ ತಾರೀಖಿನೊಳಗೆ ಪಾವತಿಸಬೇಕು. ಬಿಲ್ ಕಲೆಕ್ಟರ್ಗಳಿಗೆ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ಸ್ವಚ್ಚವಾಹಿನಿಯವರಿಗೆ ವರ್ಷಗಟ್ಟಲೆ ಸಂಬಳ ನೀಡಿಲ್ಲ. ಕೂಡಲೆ ವೇತನ ಪಾವತಿಸಿ ಸ್ವಚ್ಚತೆಗಾಗಿ ವಾಹನ ನೀಡಿ ಗ್ರಾಮ ಪಂಚಾಯಿತಿ ನೌಕರರೆಂದು ಪರಿಗಣಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ.ಮಲಿಯಪ್ಪ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಸೇವಾ ಹಿರಿತನದ ಮೇಲೆ ಮೂಲ ವೇತನಕ್ಕೆ ಶೇ. 2 ರಷ್ಟು ಹೆಚ್ಚಳ ಪ್ರತಿ ವರ್ಷ ಪರಿಗಣಿಸಿ ಹೆಚ್ಚುವರಿ ಭತ್ಯೆ ನೀಡಬೇಕು. ಸ್ವಚ್ಚವಾಹಿನಿ ಚಾಲಕರು ಮತ್ತು ಹೆಲ್ಪರ್ಗಳು ಗ್ರಾಮ ಪಂಚಾಯಿತಿಗಳಲ್ಲಿ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಸರ್ಕಾರಿ ಆದೇಶದಂತೆ ಇವರುಗಳಿಗೆ ಕಡ್ಡಾಯವಾಗಿ ವೇತನ ಪಾವತಿಸಿ ಹದಿನೈದು ಸಾವಿರ ರೂ. ಸಂಬಳ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ವೆಂಕಟೇಶ್, ಖಜಾಂಚಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ರಂಗನಾಥ್, ಜಯಲಕ್ಷ್ಮಿ, ಮಾರಪ್ಪ, ಸಂತೋಷ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ನೌಕರರು ಸ್ವಚ್ಚವಾಹಿನಿ ಚಾಲಕರು, ಹೆಲ್ಪರ್ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












