ಸುದ್ದಿಒನ್, ಚಿತ್ರದುರ್ಗ, ಜೂನ್. 11 : ಜಾಗವನ್ನು ಕಬಳಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯ ಖಾತಾ ದೃಢೀಕೃತ ನಕಲನ್ನು ತಿದ್ದುಪಡಿ ಮಾಡಿ, ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಅಕ್ರಮವಾಗಿ ಕ್ರಯಪತ್ರ ಮಾಡಿಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಗೆ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷಗಳ ಸಾದಾ ಶಿಕ್ಷೆ ಹಾಗೂ 14,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಕೂನಬೇವು ಗ್ರಾಮ ಪಂಚಾಯಿತಿಯಿಂದ ಆರೋಪಿತರಿಗೆ ಸೇರಿದ ಮಾಳಿಗೆ ಮನೆಯ ಖಾತಾ ದೃಢೀಕೃತ ನಕಲನ್ನು ಪಡೆದುಕೊಂಡಿದ್ದ ಆರೋಪಿಗಳು, ಫಿರ್ಯಾದುದಾರರ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದರು. ಈ ದೃಢೀಕೃತ ನಕಲನ್ನು ಕಾನೂನುಬಾಹಿರವಾಗಿ ತಿದ್ದುಪಡಿ ಮಾಡಿ, ಉಪನೊಂದಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಈ ನಕಲಿ ದಾಖಲೆಗಳ ಆಧಾರದ ಮೇಲೆ 2 ಮತ್ತು 3ನೇ ಆರೋಪಿಗಳು ಸೇರಿ 1ನೇ ಆರೋಪಿಯ ಹೆಸರಿಗೆ ಕ್ರಯಪತ್ರ ಬರೆದುಕೊಟ್ಟಿದ್ದರು.ಬಳಿಕ, ಈ ಕ್ರಯಪತ್ರದ ಅನ್ವಯ ತನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ 1ನೇ ಆರೋಪಿಯು ಕೂನಬೇವು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದಾಗ, ಜಾಗದ ಅಸಲಿ ಮಾಲೀಕರಾದ ಫಿರ್ಯಾದುದಾರರು ಇದಕ್ಕೆ ತೀವ್ರ ತಕರಾರು ವ್ಯಕ್ತಪಡಿಸಿದ್ದರು.
ಈ ವಂಚನೆಯ ಕುರಿತು ಫಿರ್ಯಾದುದಾರರು ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ದೂರನ್ನು ಪರಿಶೀಲಿಸಿದ ನ್ಯಾಯಾಲಯವು ಪ್ರಕರಣದ ಕುರಿತು ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ತುರುವನೂರು ಪೊಲೀಸ್ ಠಾಣೆಗೆ ಆದೇಶಿಸಿತ್ತು.
ನ್ಯಾಯಾಲಯದ ನಿರ್ದೇಶನದಂತೆ ತುರುವನೂರು ಪೊಲೀಸ್ ಠಾಣೆಯ ಅಂದಿನ ಪಿ.ಎಸ್.ಐ. ಆದ ಶಂಕರಮೂರ್ತಿ ಅವರು ಪ್ರಕರಣದ ಸಮಗ್ರ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಐಪಿಸಿ ಕಲಂ 465, 466, 468, 471 ಮತ್ತು 34 ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು.
ಪೊಲೀಸ್ ಸಿಬ್ಬಂದಿಗಳಾದ ಶಿವಣ್ಣ ಕೆ.ಟಿ. ಮತ್ತು ಮುಖ್ಯಪೇದೆ ಚಿದಾನಂದರೆಡ್ಡಿ ಅವರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿದಾರರನ್ನು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ 3ನೇ ಅಪರ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ನಿಖಿತಾ ಎಸ್. ಅಕ್ಕಿ ಅವರು ಉಭಯಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದರು. ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ 3 ವರ್ಷಗಳ ಸಾದಾ ಶಿಕ್ಷೆ ಹಾಗೂ 14,000 ರೂ. ದಂಡ ವಿಧಿಸಿ ದಿನಾಂಕ: 10.06.2026 ರಂದು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಚಿತ್ರದುರ್ಗದ ಸಹಾಯಕ ಸರ್ಕಾರಿ ಅಭಿಯೋಜಕರಾದ ಹೆಚ್.ಎಂ. ಪ್ರವೀಣ್ ಕುಮಾರ್ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















