ಸುದ್ದಿಒನ್, ಚಿತ್ರದುರ್ಗ, ಮೇ. 20: ನಗರಸಭೆ ವ್ಯಾಪ್ತಿಯ 20ನೇ ವಾರ್ಡಿನಲ್ಲಿ ಒಳಚರಂಡಿ (UGD) ಚೇಂಬರ್ಗಳು ಶಿಥಿಲಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷರಾದ ಹೆಚ್.ಎಂ.ಫಾರೂಕ್ ಅಜ್ಮತ್ ಅಲಿ ಅವರು ಆಗ್ರಹಿಸಿದ್ದಾರೆ. ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಡಳಿತಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ವಾರ್ಡಿನ ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಕಡೆಗೆ ಆಡಳಿತದ ಗಮನ ಸೆಳೆದಿದ್ದಾರೆ.
ವಾರ್ಡಿನ ಗುಲ್ಬನ್ ಮಸೀದಿ ಮುಂಭಾಗದಲ್ಲಿರುವ UGD ಚೇಂಬರ್ ಸಂಪೂರ್ಣ ಶಿಥಿಲಗೊಂಡಿದ್ದು, ಅದರ ಮುಚ್ಚಳ ಮುರಿದು ಹೋಗಿರುವುದರಿಂದ ಮಲಿನ ನೀರು ಪದೇ ಪದೇ ರಸ್ತೆ ಹಾಗೂ ಸಾರ್ವಜನಿಕರ ಮನೆ ಅಂಗಳಕ್ಕೆ ಹರಿಯುತ್ತಿದೆ. ಇದರಿಂದಾಗಿ ಶಾಲಾ ಮಕ್ಕಳು ಮತ್ತು ವಯಸ್ಸಾದವರು ಓಡಾಡಲು ತೀವ್ರ ಪರದಾಡುವಂತಾಗಿದೆ.
ಇದರೊಂದಿಗೆ ಹಳೆಯ ರವಿ ಮ್ಯಾಚಸ್ ಫ್ಯಾಕ್ಟರಿ ಹತ್ತಿರದ ಚೇಂಬರ್ ಸಹ ತೀವ್ರವಾಗಿ ಹಾಳಾಗಿದ್ದು, ಅಲ್ಲಿ ಹೆಗ್ಗಣಗಳ ಕಾಟ ಅತಿಯಾಗಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಅಲ್ಲದೆ, ಈ ಹಿಂದೆ 2024ರ ಜನವರಿಯಲ್ಲೇ ಕುಡಿಯುವ ನೀರು ರಸ್ತೆಗೆ ಪೋಲಾಗುತ್ತಿರುವ ಬಗ್ಗೆ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲದೆ, ಆಲಾ ಮಸೀದಿ ಹತ್ತಿರ ಚರಂಡಿ ಮೇಲಿರುವ ಸೇತುವೆ ಸಹ ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹಾಗೂ ಹಿಲ್ಮುಲ್ ಉದಾ ಉರ್ದು ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಚರಂಡಿ ಸರಾಗವಾಗಿ ಹರಿಯದೆ ಕಸಕಡ್ಡಿಗಳಿಂದ ಬ್ಲಾಕ್ ಆಗಿದೆ ಎಂದು ಅವರು ವಿವರಿಸಿದ್ದಾರೆ.
ಸದ್ಯ ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳೂ ಆಗಿರುವುದರಿಂದ, ಅವರೇ ಖುದ್ದಾಗಿ ಅಥವಾ ನಗರಸಭೆ ಆಯುಕ್ತರು ಹಾಗೂ ಅಭಿಯಂತರನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಬೇಕು. ಶಿಥಿಲಗೊಂಡಿರುವ ಚೇಂಬರ್ಗಳನ್ನು ಹೊಸದಾಗಿ ನಿರ್ಮಿಸಿ, ಚರಂಡಿಗಳನ್ನು ದುರಸ್ತಿ ಮಾಡುವ ಮೂಲಕ ಸಾರ್ವಜನಿಕರ ನೆಮ್ಮದಿಗೆ ಹಾದಿ ಮಾಡಿಕೊಡಬೇಕು ಎಂದು ಹೆಚ್.ಎಂ.ಫಾರೂಕ್ ಅವರು ಮನವಿಯಲ್ಲಿ ಸವಿನಯವಾಗಿ ಪ್ರಾರ್ಥಿಸಿದ್ದು, ತಮ್ಮ ಮನವಿ ಪತ್ರದ ಪ್ರತಿಯನ್ನು ಸಹ ಜಿಲ್ಲಾಧಿಕಾರಿಗಳ ಗಮನಕ್ಕೆ ಲಗತ್ತಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















