ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 13 : ನಗರದ ಸಮೀಪ ಇರುವ ಮದಕರಿಪುರದಲ್ಲಿ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಊರಿಗೇ ಊರೇ ಸಿಂಗಾರಗೊಂಡಿದ್ದು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಏಪ್ರಿಲ್ 12ರ ಶನಿವಾರದಿಂದಲೇ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಏಪ್ರಿಲ್ 20ರ ವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಲಿದ್ದಾರೆ.
ಏಪ್ರಿಲ್ 12ರಂದು ಆಂಜನೇಯ ಸ್ವಾಮಿಗೆ ಕುಂಕುಮಾರ್ಚನೆ ಮತ್ತು ಕಂಕಣಧಾರಣೆ ಮೂಲಕ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಇಂದು (ಏಪ್ರಿಲ್ 13ರ ಭಾನುವಾರ) ರಾತ್ರಿ 9 : 30 ಗಂಟೆಗೆ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಸಾವಿರಾರು ಭಕ್ತರ ಮಧ್ಯೆ ನೆರವೇರಿತು. ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು ತೂರಿದರು.
ತೇರು ಆರಂಭಕ್ಕೂ ಮುನ್ನ ದೇವರಿಗೆ ವಿಶೇಷ ಪೂಜೆ, ಅಲಂಕಾರದ ಬಳಿಕ ಪಲ್ಲಕ್ಕಿ ಉತ್ಸವವನ್ನು ಮಂಗಳವಾದ್ಯದೊಂದಿಗೆ ಗ್ರಾಮದಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಅರ್ಪಿಸಿದ ಬಾಳೆಹಣ್ಣು, ಬೆಲ್ಲದ ಎಡೆಯನ್ನು ದಾಸರು ಮತ್ತು ಯುವಕರು ಮಣೇವು ಆಡಿ ಸೇವಿಸಿದರು. ಈ ವೇಳೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಅಪಾರ ಜನಮನ್ನಣೆ ಗಳಿಸಿದ್ದು, ಭಕ್ತಿಯಿಂದ ಬರುವ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.
ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣವಿತ್ತು. ಮನೆಯಂಗಳದಲ್ಲಿ ರಂಗೋಲಿ ಬಿಡಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇಗುಲದಲ್ಲಿ ಮುಂಜಾನೆಯಿಂದಲೂ ಧಾರ್ಮಿಕ ಕಾರ್ಯಗಳು ನೆರವೇರಿದವು. ಬೆಳಗ್ಗೆಯಿಂದಲೇ ಭಕ್ತರು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ಭಕ್ತರು ಹರಕೆ ಸಲ್ಲಿಸಿದರು.
ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ :
ಏಪ್ರಿಲ್ 14ರಂದು ಬೆಳಿಗ್ಗೆ 06 ಗಂಟೆಗೆ ಭೂತನ ಎಡೆ ಮತ್ತು ಸಂಜೆ ಓಕುಳಿ ಉತ್ಸವ
ಏಪ್ರಿಲ್ 15-ರಾತ್ರಿ 9.30ಕ್ಕೆ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಗೆ ಕಂಕಣಧಾರಣೆ, ಸಂಜೆ 04 ಗಂಟೆಗೆ ಹೂವಿನ ಅಲಂಕಾರ ಉತ್ಸವ
ಏಪ್ರಿಲ್ 16ರ ರಾತ್ರಿ 9.30ಕ್ಕೆ ದೇವಿಗೆ ಮೀಸಲು-ಮಂಗಳರಾತಿ ಉತ್ಸವ,
ಏಪ್ರಿಲ್ 17-ರಾತ್ರಿ 9.30ಕ್ಕೆ ದೇವಿಯ ರಥೋತ್ಸವ, ಈ ವೇಳೆ ಗ್ರಾಮಸ್ಥರಿಂದ ಕೀಲು ಕುದುರೆ ಮತ್ತು ಸೋಮನ ಕುಣಿತ
ಏಪ್ರಿಲ್ 18-ಸಂಜೆ 5ಕ್ಕೆ ಸಿಡಿ ಉತ್ಸವ, ನಂತರ 8 ಗಂಟೆಗೆ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಏಪ್ರಿಲ್ 19-ಸಂಜೆ 5ಕ್ಕೆ ಪೋತರಾಜರಿಂದ ಹುಲಸಿನ ಗುಂಡಿ ಪೂಜೆ,
ಏಪ್ರಿಲ್ 20-ಸಂಜೆ 6.30ಕ್ಕೆ ಓಕುಳಿ ಉತ್ಸವ ಹಾಗೂ ಸೋಮನ ಎಡೆ ಕಾರ್ಯ ನಡೆಯಲಿದ್ದು, ಈ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.