Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಪೌರಕಾರ್ಮಿಕರ ಶ್ರಮಕ್ಕೆ ಸಲಾಂ : ಹಿಂದೂ ಮಹಾಗಣಪತಿ ಮೆರವಣಿಗೆ ಮುಗಿದ ಬೆನ್ನಲ್ಲೇ ಸ್ವಚ್ಛಗೊಂಡ ಕೋಟೆನಾಡು.!

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿಯ ಭವ್ಯ ವಿಸರ್ಜನಾ ಶೋಭಾಯಾತ್ರೆಯಲ್ಲಿ  ಲಕ್ಷಾಂತರ ಭಕ್ತರು ಪಾಲ್ಗೊಂಡು ಮೆರವಣಿಗೆಯನ್ನು ಯಶಸ್ವಿಗೊಳಿಸಿದ್ದು, ಅಪಾರ ಜನಸ್ತೋಮ ಜಮಾಯಿಸಿದ್ದರಿಂದ ರಸ್ತೆಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಪ್ಲೇಟ್ಗಳು, ಹಣ್ಣು-ಹಂಪಲುಗಳ ತ್ಯಾಜ್ಯ, ಕವರ್ಗಳು ಹಾಗೂ ಪಾದರಕ್ಷೆಗಳು ರಾಶಿ ಬಿದ್ದಿದ್ದವು. ಭಾನುವಾರ ಮುಂಜಾನೆ 5 ಗಂಟೆಯಿಂದಲೇ ರಸ್ತೆಗಿಳಿದ ಪೌರಕಾರ್ಮಿಕರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಇಡೀ ನಗರವನ್ನು 12 ಗಂಟೆ ವೇಳೆಗೆ ಸ್ವಚ್ಛಗೊಳಿಸಿ ಕಂಗೊಳಿಸುವಂತೆ ಮಾಡಿದ್ದಾರೆ.

40 ಟನ್ ತ್ಯಾಜ್ಯ ಸಂಗ್ರಹ: ಪೌರಕಾರ್ಮಿಕರ ಶ್ರಮಕ್ಕೆ ನಾಗರಿಕರ ಸಲಾಂ

ಮೆರವಣಿಗೆ ನಡೆದ ಮಾರ್ಗದಲ್ಲಿ ಶೇಖರಣೆಯಾಗಿದ್ದ ಸುಮಾರು 40 ಟನ್ ತ್ಯಾಜ್ಯವನ್ನು ಪೌರಕಾರ್ಮಿಕರು ಕಸ ಸಂಗ್ರಹ ವಾಹನಗಳ ಮೂಲಕ ತೆರವುಗೊಳಿಸಿದರು. ನಿನ್ನೆ ರಾತ್ರಿಯೂ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ಸಿಬ್ಬಂದಿ, ಇಂದು ಬೆಳಗ್ಗೆಯಿಂದ ನಿರಂತರವಾಗಿ ಶ್ರಮಿಸಿ ನಗರವನ್ನು ಮತ್ತೆ ಸಹಜ ಸ್ಥಿತಿಗೆ ತಂದಿದ್ದಾರೆ. ಪೌರಕಾರ್ಮಿಕರ ಈ ತ್ವರಿತ ಹಾಗೂ ಕರ್ತವ್ಯನಿಷ್ಠ ಕಾರ್ಯವೈಖರಿಗೆ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತಾ ಕಾರ್ಯದ ವೇಳೆ ಸಂಗ್ರಹವಾದ ಹಸಿ ಕಸ ಮತ್ತು ಒಣ ಕಸವನ್ನು ಸ್ಥಳದಲ್ಲೇ ಪ್ರತ್ಯೇಕಿಸಲಾಯಿತು. ಎಸ್ಬಿಐ ಫೌಂಡೇಶನ್ ಆರ್ಥಿಕ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಐಐಎಚ್ಎಸ್ (IIHS) ಎನ್ಜಿಒ ಸಂಸ್ಥೆಗೆ ಹಸಿ ಕಸ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಈ ಸಂಸ್ಥೆಯು ನಿರ್ದಿಷ್ಟ ಘಟಕಗಳಲ್ಲಿ ವೈಜ್ಞಾನಿಕವಾಗಿ ಹಸಿ ಕಸ ಸಂಸ್ಕರಿಸಿ, ರೈತರಿಗೆ ಸೂಕ್ತ ತರಬೇತಿ ನೀಡಿ ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಸಿ ವಿತರಿಸಲಿದೆ. ಇನ್ನು ಪ್ಲಾಸ್ಟಿಕ್ ಸೇರಿದಂತೆ ಸಂಗ್ರಹವಾದ ಒಣ ಕಸವನ್ನು ನಗರಸಭೆಗೆ ಸೇರಿದ ಸುಮಾರು 35 ಎಕರೆ ವಿಸ್ತೀರ್ಣದ ಹಳೆ ದ್ಯಾವನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.

ಕಸ ವಿಂಗಡಣೆಗೆ ಪೌರಾಯುಕ್ತರ ಕರೆ :

ಚಿತ್ರದುರ್ಗ ನಗರದಲ್ಲಿ ಶನಿವಾರ ಜರುಗಿದ ಐತಿಹಾಸಿಕ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಸಂದರ್ಭದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಒಟ್ಟು 30 ರಿಂದ 40 ಟನ್ ಕಸ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಪೌರಾಯುಕ್ತರಾದ ಎಸ್. ಲಕ್ಷ್ಮಿ ಅವರು ತಿಳಿಸಿದ್ದಾರೆ.

ಶೋಭಾಯಾತ್ರೆಗೆ ಮೂರು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರ, ವಿವಿಧ ಸಂಘಟನೆಗಳು, ಆಟೋ ಚಾಲಕರು, ತರಕಾರಿ ಮಾರುಕಟ್ಟೆ ಹಾಗೂ ಟ್ಯಾಕ್ಸಿ ಸಂಘಟನೆಗಳು ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಿದ್ದವು. ಈ ವೇಳೆ ಕಸ ವಿಲೇವಾರಿಗಾಗಿ ವಾಹನಗಳನ್ನು ನಿಯೋಜಿಸಲಾಗಿದ್ದರೂ, ಅಪಾರ ಜನಸಂದಣಿಯಿಂದಾಗಿ ರಸ್ತೆಗಳಲ್ಲಿ ಪ್ಲಾಸ್ಟಿಕ್, ತಟ್ಟೆಗಳು, ನೀರಿನ ಬಾಟಲಿಗಳು ಹಾಗೂ ಹಣ್ಣಿನ ತ್ಯಾಜ್ಯಗಳು ರಾಶಿ ಬಿದ್ದಿದ್ದವು. ಶೋಭಾಯಾತ್ರೆಯ ದಿನವೂ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಆರೋಗ್ಯ ನಿರೀಕ್ಷಕರು, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಜಾಫರ್, ಆರೋಗ್ಯ ನಿರೀಕ್ಷಕರು ಹಾಗೂ ನೂರಾರು ಪೌರಕಾರ್ಮಿಕರು ನಗರದಾದ್ಯಂತ ಕಾರ್ಯಾಚರಣೆ ಮಾಡಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಇಡೀ ನಗರವನ್ನು ಸ್ವಚ್ಛಗೊಳಿಸಿದರು.  ಸಂಗ್ರಹವಾದ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿಯೇ ಎಸ್ಡಬ್ಲ್ಯೂಎಂ ಘಟಕಕ್ಕೆ ಸಾಗಿಸಲಾಗುತ್ತಿದ್ದು, ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರಿಕೆಗೆ ಬಳಸಲಾಗುವುದು. ಸಾರ್ವಜನಿಕರು ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರು ಮನೆಯಲ್ಲೇ ಕಸವನ್ನು ಬೇರ್ಪಡಿಸಿ ನೀಡಬೇಕು ಮತ್ತು ಎಲ್ಲೆಂದರಲ್ಲಿ ಕಸ ಎಸೆಯದೆ ಕಸದ ಬುಟ್ಟಿಗಳನ್ನೇ ಬಳಸುವ ಮೂಲಕ ನಗರಸಭೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರ(ಪರಿಸರ) ಜಾಫರ್, ಆರೋಗ್ಯ ನಿರೀಕ್ಷಕರಾದ ರುಕ್ಮಿಣಿ, ನಿರ್ಮಲ, ಬಾಬುರೆಡ್ಡಿ, ಕಿರಿಯ ಆರೋಗ್ಯ ನಿರೀಕ್ಷಕರಾದ ಹೀನಾ ಕೌಸರ್, ಜಯಪ್ರಕಾಶ್, ಸೂಪರ್ವೈಸರ್ ಶ್ರೀನಿವಾಸ್, ಲಿಂಗರಾಜ್, ಮಂಜುನಾಥ್, ಶಿವಕುಮಾರ್, ಗಂಗಮ್ಮ, ನಾಗರತ್ನಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now