ಬೆಂಗಳೂರು: ನಿನ್ನೆ ತಡರಾತ್ರಿ 12.01 ಗಂಟೆ ಸುಮಾರಿಗೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶರಾಗಿದ್ದಾರೆ. ಸ್ವಾಮಿಗಳ ನಿಧನದಿಂದ ಭಕ್ತರು, ಅನುಯಾಯಿಗಳು ನೋವಲ್ಲಿದ್ದಾರೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದವರು.
ಕೆಂಗೇರಿಯಲ್ಲಿ ಶ್ರೀಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ತಡರಾತ್ರಿ 12 ಗಂಟೆ 1 ನಿಮಿಷಕ್ಕೆ ವಿಧಿವಶರಾಗಿದ್ದಾರೆ. ಸ್ವಾಮೀಜಿಗಳ ಅಂತಿಮ ದರ್ಶನವನ್ನು ಇಂದು ಶ್ರೀಮಠದ ಆವರಣದಲ್ಲಿಯೇ ಏರ್ಪಡಿಸಲಾಗಿದೆ. 1974ರಲ್ಲಿ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ವಿಶ್ವ ಒಕ್ಕಲಿಗ ಮಠ ಅಸ್ತಿತ್ವಕ್ಕೆ ಬಂತು. ಆಗಿನಿಂದಲೂ ಈ ಮಠಕ್ಕೆ ಚಂದ್ರಶೇಖರನಾಥ ಸ್ವಾಮೀಜಿಯೇ ಪೀಠಾಧಿಪತಿಯಾಗಿದ್ದರು.

ಆದರೆ ಕಳೆದ ಒಂದು ತಿಂಗಳಿನಿಂದ ಸ್ವಾಮೀಜಿ ಆರೋಗ್ಯದಲ್ಲಿ ಸರಿ ಇರಲಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಧಾರ್ಮಿಕ ಮುಖಂಡರು, ಪೀಠಾಧ್ಯಕ್ಷರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳು ನೆರವೇರಿಸಲಿದ್ದಾರೆ. ಮಧ್ಯಾಹ್ನದ ತನಕವೂ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಮಠದ ಅಂಗಳದಲ್ಲಿಯೇ ಇಡಲಾಗುತ್ತಿದೆ. ಹೀಗಾಗಿ ಭಕ್ತರು, ಅನುಯಾಯಿಗಳು ಸ್ವಾಮೀಜಿಗಳ ಅಂತಿಮ ದರ್ಶನವನ್ನು ಮಾಡಬಹುದು. ಬಳಿಕ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಆಗಿವೆ. ಚಂದ್ರಶೇಖರನಾಥ ಸ್ವಾಮೀಜಿಗಳ ನಿಧನ ಭಕ್ತರಿಗೆ ಅಪಾರ ನೋವು ತಂದಿದೆ.










