ಆಚಾರ್ಯ ಚಾಣಕ್ಯರ ಪ್ರಕಾರ, ಈ ಜಗತ್ತಿನಲ್ಲಿ ಅತಿಯಾದ ನೇರ ನಡೆನುಡಿಯುಳ್ಳ ಅಥವಾ ಮುಗ್ಧ ವ್ಯಕ್ತಿಯನ್ನು ಜನರು ಸುಲಭವಾಗಿ ಬಳಸಿಕೊಳ್ಳುತ್ತಾರೆ. ಆದರೆ ಚಾಣಾಕ್ಷ ಬುದ್ಧಿಯಿರುವವರು ಜಗತ್ತನ್ನು ಆಳುತ್ತಾರೆ. ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಜನರು ಮುಖದ ಮೇಲೆ ನಗು ಇಟ್ಟುಕೊಂಡೇ ಮನಸ್ಸಿನಲ್ಲಿ ನಿಮ್ಮನ್ನು ಸೋಲಿಸುವ ತಂತ್ರ ರೂಪಿಸುತ್ತಿರುತ್ತಾರೆ. ಇಂತಹ ಚಾಣಾಕ್ಷ ಜನರ ನಡುವೆ ನಿಮ್ಮ ಮೌಲ್ಯವನ್ನು ಉಳಿಸಿಕೊಳ್ಳಲು ಮತ್ತು ಮೋಸ ಹೋಗದಂತೆ ಬದುಕಲು ಚಾಣಕ್ಯ ನೀತಿಯ ಕೆಲವು ಕಹಿ ಸತ್ಯ ಹಾಗೂ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಆಚಾರ್ಯ ಚಾಣಕ್ಯರು ತಿಳಿಸಿರುವ ಆ ಪ್ರಮುಖ ಜೀವನ ಸೂತ್ರಗಳು ಇಲ್ಲಿವೆ:
ನಿಮ್ಮ ಆಲೋಚನೆಗಳನ್ನು ಎಲ್ಲರ ಮುಂದೆಯೂ ಬಿಚ್ಚಿಡಬೇಡಿ:
ಕೈಯಲ್ಲಿ ಕತ್ತಿ ಹಿಡಿದಿರುವವನಿಗಿಂತ ತನ್ನ ಮನಸ್ಸಿನ ಉದ್ದೇಶವನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿಡುವ ವ್ಯಕ್ತಿ ಹೆಚ್ಚು ಅಪಾಯಕಾರಿ. ಆದ್ದರಿಂದ ನಿಮ್ಮ ಗುರಿ ಅಥವಾ ಆಲೋಚನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಡಿ. ಜನರು ನಿಮ್ಮ ದೌರ್ಬಲ್ಯವನ್ನು ತಿಳಿಯಲು ಮಾತ್ರ ನಿಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ. ನಿಮ್ಮ ಮನಸ್ಸಿನ ಆಲೋಚನೆಗಳು ಇತರರಿಗೆ ತಿಳಿಯುತ್ತಿದ್ದಂತೆಯೇ ನಿಮ್ಮ ಶಕ್ತಿ ಕುಂದುತ್ತದೆ ಎಂಬುದನ್ನು ನೆನಪಿಡಿ.
ಯಾರನ್ನೂ ಸುಲಭವಾಗಿ ನಂಬಬೇಡಿ:
ಮನುಷ್ಯನ ಮುಖವು ಅವನ ಅಸಲಿ ಗುಣವನ್ನು ಮರೆಮಾಚುತ್ತದೆ. ಜನರು ಮುಖದ ಮೇಲೆ ಸಿಹಿಯಾಗಿ ಮಾತನಾಡಿ ಮನಸ್ಸಿನಲ್ಲಿ ಬೇರೆಯದೇ ಯೋಚನೆ ಹೊಂದಿರುತ್ತಾರೆ. ಯಾರನ್ನೂ ಅತಿ ಬೇಗನೆ ನಂಬಬೇಡಿ. ನಂಬಿಕೆಯನ್ನು ಗಳಿಸಬೇಕೇ ಹೊರತು ಸುಮ್ಮನೆ ಉಡುಗೊರೆಯಾಗಿ ನೀಡಬಾರದು. ಯಾರನ್ನಾದರೂ ಪರೀಕ್ಷಿಸಬೇಕಾದರೆ ಅವರ ಕಷ್ಟದ ಸಮಯದಲ್ಲಿ ಗಮನಿಸಿ, ಆಗಲೇ ಅವರ ನಿಜವಾದ ಬಣ್ಣ ಹೊರಬರುತ್ತದೆ.
ಭಾವನೆಗಳ ಮೇಲೆ ನಿಯಂತ್ರಣವಿರಲಿ:
ಕೋಪ, ಭಯ, ದುರಾಸೆ ಮತ್ತು ವ್ಯಾಮೋಹ – ಇವು ಮನುಷ್ಯನ ನಾಲ್ಕು ಪ್ರಮುಖ ದೌರ್ಬಲ್ಯಗಳು. ಇವುಗಳ ಮೂಲಕ ಇತರರು ನಿಮ್ಮನ್ನು ನಿಯಂತ್ರಿಸಬಹುದು. ಯಾರಾದರೂ ಸಣ್ಣ ವಿಷಯಕ್ಕೆ ನಿಮ್ಮನ್ನು ಕೆರಳಿಸುತ್ತಿದ್ದಾರೆ ಎಂದರೆ, ಅವರು ನಿಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದರ್ಥ. ಬುದ್ಧಿವಂತ ವ್ಯಕ್ತಿಯು ಯಾವುದೇ ಪರಿಸ್ಥಿತಿಯಲ್ಲೂ ತನ್ನ ಮಾತು ಮತ್ತು ಮುಖದ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೆ ಹಾಗೂ ಸರಿಯಾದ ಸಮಯಕ್ಕಾಗಿ ಕಾಯುತ್ತಾನೆ.
ಜನರನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಿರಿ:
ಪುಸ್ತಕಗಳ ಜ್ಞಾನ ನಿಮ್ಮನ್ನು ಬುದ್ಧಿವಂತನನ್ನಾಗಿ ಮಾಡಿದರೆ, ಜನರ ಜ್ಞಾನ ನಿಮ್ಮನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಾತುಗಳಿಂದ ಒಂದು ಮುಖ ತೋರಿಸಿದರೆ, ವರ್ತನೆಯಿಂದ ಮತ್ತೊಂದು ಮುಖವನ್ನು ತೋರಿಸುತ್ತಾನೆ. ಹಾಗಾಗಿ ಕೇವಲ ಮಾತುಗಳನ್ನು ಕೇಳಬೇಡಿ; ಜನರ ಅಭ್ಯಾಸಗಳು, ಹಾವಭಾವ ಹಾಗೂ ಬದಲಾಗುವ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ.
ಅತಿಯಾದ ಒಳ್ಳೆಯವರಾಗಬೇಡಿ:
ಅತಿಯಾದ ಒಳ್ಳೆಯತನವನ್ನು ಜಗತ್ತು ದೌರ್ಬಲ್ಯ ಎಂದು ಭಾವಿಸುತ್ತದೆ. ಎಲ್ಲದಕ್ಕೂ ‘ಹೂಂ’ ಎನ್ನುವವರನ್ನು ಜನರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ದಯಾಪರರಾಗಿರಿ, ಆದರೆ ಅದಕ್ಕೊಂದು ಮಿತಿಯಿರಲಿ. ಇತರರಿಗಾಗಿ ನಿಮ್ಮನ್ನು ನೀವು ಇಲ್ಲವಾಗಿಸಿಕೊಳ್ಳುವುದು ಬುದ್ಧಿವಂತಿಕೆಯಲ್ಲ, ಬದಲಿಗೆ ಮೂರ್ಖತನ.
ಸದಾ ಕಲಿಯುತ್ತಿರಿ:
ಜ್ಞಾನ ಎನ್ನುವುದು ಯಾರೂ ಕದಿಯಲಾಗದ ಬಹುದೊಡ್ಡ ಶಕ್ತಿ. ಕಲಿಯುವುದನ್ನು ನಿಲ್ಲಿಸಿದ ವ್ಯಕ್ತಿ ಕಾಲದ ಓಟದಲ್ಲಿ ಹಿಂದೆ ಉಳಿಯುತ್ತಾನೆ. ಪ್ರಸ್ತುತ ಜಗತ್ತು ವೇಗವಾಗಿ ಬದಲಾಗುತ್ತಿದೆ. ನೀವೂ ಬದಲಾಗದಿದ್ದರೆ ಹಿಂದೆ ಬೀಳುತ್ತೀರಿ. ಆದ್ದರಿಂದ ನಿಮ್ಮ ತಪ್ಪುಗಳಿಂದ ಮಾತ್ರವಲ್ಲ, ಇತರರ ತಪ್ಪುಗಳಿಂದಲೂ ಪಾಠ ಕಲಿಯಿರಿ.
ಸಮಯೋಚಿತ ಮೌನ ಕಲಿಯಿರಿ:
ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಅನಿವಾರ್ಯವಲ್ಲ. ಅತಿಯಾಗಿ ಮಾತನಾಡುವ ವ್ಯಕ್ತಿಯ ದೌರ್ಬಲ್ಯಗಳನ್ನು ಜನರು ಸುಲಭವಾಗಿ ಅರಿತುಕೊಳ್ಳುತ್ತಾರೆ. ಬುದ್ಧಿವಂತ ವ್ಯಕ್ತಿ ಕಡಿಮೆ ಮಾತನಾಡಿ, ಹೆಚ್ಚು ಕೇಳಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಮೌನವೇ ಅತ್ಯಂತ ಬಲಿಷ್ಠವಾದ ಉತ್ತರವಾಗಿರುತ್ತದೆ.
ನಿಮ್ಮ ಮೌಲ್ಯವನ್ನು ನೀವೇ ನಿರ್ಧರಿಸಿ:
ನೀವು ಎಲ್ಲರಿಗೂ, ಎಲ್ಲಾ ಸಮಯದಲ್ಲೂ ಲಭ್ಯವಿದ್ದರೆ ಮತ್ತು ಎಲ್ಲರನ್ನೂ ಮೆಚ್ಚಿಸಲು ಹೋದರೆ ಜನರು ನಿಮ್ಮನ್ನು ಹಗುರವಾಗಿ ಪರಿಗಣಿಸುತ್ತಾರೆ. ಸುಲಭವಾಗಿ ಸಿಗದ ವಸ್ತುವಿಗೆ ಮಾತ್ರ ಜಗತ್ತು ಮೌಲ್ಯ ನೀಡುತ್ತದೆ. ಆದ್ದರಿಂದ ನಿಮ್ಮ ಮೌಲ್ಯವನ್ನು ನೀವೇ ನಿರ್ಧರಿಸಿ ಹಾಗೂ ನಿಮ್ಮ ಸಮಯ ಮತ್ತು ಶಕ್ತಿಯನ್ನು ಸರಿಯಾದ ಜಾಗದಲ್ಲಿ ವಿನಿಯೋಗಿಸಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










