ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ವೃತ್ತಿಯಲ್ಲಿ ದಂತ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಹಳ್ಳಿಗಳು ಮತ್ತು ಅದರ ಇತಿಹಾಸವನ್ನು ದಾಖಲಿಸುವ ಅದ್ಭುತ ಶೋಧಕರಾಗಿ ಡಾ. ಕೆ.ವಿ. ಸಂತೋಷ್ ರವರು ಹೊರಹೊಮ್ಮಿದ್ದಾರೆ. ಗ್ರಾಮಾಂತರ ಪ್ರದೇಶದ ಆಚಾರ-ವಿಚಾರ, ಜನರು, ಉಡುಗೆ-ತೊಡುಗೆ, ಭಾಷೆ, ಜನಪದ ಹಾಗೂ ಹಬ್ಬ-ಜಾತ್ರೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು, ಹತ್ತಾರು ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ, 500 ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಮಟ್ಟದಲ್ಲಿ ಕ್ಷೇತ್ರಕಾರ್ಯ ನಡೆಸಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ಅಲ್ಲಿನ ದೇವಾಲಯಗಳು, ವೀರಗಲ್ಲು-ಮಾಸ್ತಿಗಲ್ಲುಗಳು ಮತ್ತು ಸ್ಥಳೀಯ ಚರಿತ್ರೆಯನ್ನು ಸ್ವಲ್ಪವೂ ತಪ್ಪಾಗದಂತೆ ಇಂಚಿಂಚಾಗಿ ಕಲೆಹಾಕಿ, ತಾವೇ ಪ್ರಕಾಶಕರಾಗಿ ‘ಹೊಳಲ್ಕೆರೆ ತಾಲೂಕು ದರ್ಶನ’ ಹಾಗೂ ‘ಚಿತ್ರದುರ್ಗ ತಾಲೂಕು ದರ್ಶನ’ ಎಂಬ ಮಹತ್ವದ ಪುಸ್ತಕಗಳನ್ನು ಕೂಡ ಹೊರತಂದಿದ್ದಾರೆ.
ಡಾ. ಸಂತೋಷ್ ಅವರ ಈ ಸಾಧನೆಗೆ ವೃತ್ತಿಯಲ್ಲಿ ವ್ಯಾಪಾರಸ್ಥರಾದ ಅವರ ತಂದೆ ವಿಠಲರಾವ್ ಹಾಗೂ ತಾಯಿ ಮಂಜುಳಾ ರವರ ಪ್ರೋತ್ಸಾಹವೇ ಮೂಲ ಕಾರಣ.
ಅವರ ಸದಾಕಾಲದ ಬರವಣಿಗೆ ಮತ್ತು ಅಧ್ಯಯನದ ಪ್ರಯತ್ನಗಳಿಗೆ ಹೆಂಡತಿ ಅಶ್ವಿನಿ ಬೆನ್ನೆಲುಬಾಗಿ ನಿಂತಿದ್ದಾರೆ.
2006 ರಲ್ಲಿ ಹೊಳಲ್ಕೆರೆಯಲ್ಲಿ ಪ್ರಥಮವಾಗಿ ದಂತ ಚಿಕಿತ್ಸಾಲಯವನ್ನು ತೆರೆದು ವೃತ್ತಿ ಪ್ರಾರಂಭಿಸಿದಾಗ ಅವರಿಗೆ ಅಲ್ಲಿನ ಯಾವುದೇ ಗ್ರಾಮಗಳ ಹೆಸರುಗಳು ತಿಳಿದಿರಲಿಲ್ಲ.
ಹೊಳಲ್ಕೆರೆಯ ಸ್ಥಳೀಯ ಇತಿಹಾಸ ಹಾಗೂ ಅದರ ಗ್ರಾಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೊಳೆತು ಅಲ್ಲಿಗೆ ಬರುತ್ತಿದ್ದ ರೋಗಿಗಳ ಸಂಪರ್ಕ ಹಾಗೂ ಅಲ್ಲಿದ್ದ ಹಿರಿಯ ಲೇಖಕರ ಮಾರ್ಗದರ್ಶನ ಪಡೆದು
2014 ರಲ್ಲಿ ಹೊಳಲ್ಕೆರೆ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿ ಹಾಗೂ ಶಿಕ್ಷಕರಾಗಿದ್ದ ದಿ.ಎಂ.ಜಿ. ವೆಂಕಟೇಶ್ ರವರು ಸಂತೋಷ ರವರ ಬರವಣಿಗೆ ಆಸಕ್ತಿ ಗುರುತಿಸಿ ಹೊಳಲ್ಕೆರೆ ತಾಲೂಕು ದರ್ಶನ ಪುಸ್ತಕ ರಚಿಸುವಂತೆ ಅವರನ್ನು ಹುರಿದುಂಬಿಸಿ, ಸೂಕ್ತ ಮಾರ್ಗದರ್ಶನ ಕೊಟ್ಟು ‘ಹೊಳಲ್ಕೆರೆ ತಾಲ್ಲೂಕು ದರ್ಶನ’ ಕೃತಿ ರಚಿಸಲು ಪರೋಕ್ಷವಾಗಿ ಕಾರಣಕರ್ತರಾದರು. ಈ ಪುಸ್ತಕ ಹೊರ ಬಂದ ನಂತರ ಡಾ.ಕೆ.ವಿ.ಸಂತೋಷ್, ಹೊಳಲ್ಕೆರೆ ತಾಲೂಕಿನ ತಾಲೂಕಿನ ಮನೆಮಾತಾದರು. ಇದಕ್ಕಾಗಿ ಸಿರಾದ ಡಾ.ನಂದೀಶ್ವರರವರು ಕೂಡ ಅಗತ್ಯ ಸಹಕಾರ ಸಲಹೆ ನೀಡಿ ಡಾ. ಕೆ ವಿ ಸಂತೋಷ್ ರವರನ್ನು ಉತ್ತಮ ಸಂಶೋಧಕ ಹಾಗೂ ಲೇಖಕರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರ ಹತ್ತು ವರ್ಷಗಳ ನಂತರ ‘ಚಿತ್ರದುರ್ಗ ತಾಲ್ಲೂಕು ದರ್ಶನ’ ಕೃತಿಯನ್ನು ಹಂಪಿ ವಿವಿಯ ಡಾ. ಎಸ್.ವೈ. ಸೋಮಶೇಖರ್ ರವರ ಮಾರ್ಗದರ್ಶನ ಪಡೆದು ಲೋಕಾರ್ಪಣೆಗೊಳಿಸಿದರು.
ತಮ್ಮ ಚಿಕಿತ್ಸಾಲಯಕ್ಕೆ ಬರುತ್ತಿದ್ದವರ ಹೆಸರು ಮತ್ತು ನಮ್ಮನ್ನು ದಾಖಲಿಸಿಕೊಳ್ಳುವಾಗ, ಅವರ ಊರು ತಾಲೂಕಿನ ಯಾವ ಭಾಗದಲ್ಲಿದೆ ಮತ್ತು ಅಲ್ಲಿನ ಸಾಂಸ್ಕೃತಿಕ ವೈಭವವೇನು? “ನಾನು ನಿಮ್ಮ ಊರಿಗೆ ಒಮ್ಮೆ ಬರಬಹುದೇ? ಪರಿಚಯಿಸುತ್ತೀರಾ?” ಎಂದು ರೋಗಿಗಳನ್ನು ಕೇಳಿಕೊಂಡು ಭೇಟಿ ನೀಡಲು ಆರಂಭಿಸಿದರು.
ಇಂದು ಅವರ ಕ್ಲಿನಿಕ್ಕಿಗೆ ಬರುವ ಪ್ರತಿ ರೋಗಿಯು ಅವರಿಗೆ ಮಾಹಿತಿದಾರರಾಗಿದ್ದಾರೆ.
ರೋಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಇವರು, ಜನರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ, ಕ್ಷೇತ್ರ ಕಾರ್ಯವನ್ನು ನಡೆಸಿ ಹಿರಿಯ ಸಂಶೋಧಕರು ಹಾಗೂ ಇತಿಹಾಸ ತಜ್ಞರ ಬಳಿಯಲ್ಲಿ ಚರ್ಚಿಸಿ ತಾವು ಸಂಗ್ರಹಿಸಿದ ಮಾಹಿತಿಯು ಸಂಪೂರ್ಣ ಅಧ್ಯಯನ ಯೋಗ್ಯ ದಾಖಲೆಯನ್ನಾಗಿ ರೂಪಿಸುತ್ತಾರೆ.
ಮೊದಮೊದಲು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರಿಂದ ವಿಚಿತ್ರ ನೋಟ, ಹತ್ತಾರು ಪ್ರಶ್ನೆಗಳು ಎದುರಾಗುತ್ತಿದ್ದವು. ಇವರನ್ನು ವಿಗ್ರಹಚೋರ, ನಿಧಿಕಳ್ಳ ಎಂಬಂತೆ ನೋಡಿ, ಗ್ರಾಮಗಳಿಗೆ ಹೋಗದಂತೆ ತಡೆದು ಜಗಳವಾಡಿದ್ದೂ ಉಂಟು. ಕೆಲವು ಕಡೆ ನಮ್ಮ ಊರಿನ ಚರಂಡಿ ಸರಿಪಡಿಸಿ ನೀರಿನ ಸಮಸ್ಯೆ ಸರಿಪಡಿಸಿ ರಸ್ತೆ ಸಮಸ್ಯೆ ಸರಿಪಡಿಸಿ ಅದನ್ನು ಬಿಟ್ಟು ಬೇಡದ ವಿಚಾರ ತೆಗೆದುಕೊಂಡು ಏನು ಮಾಡುತ್ತೀರಾ? ಎಂಬೆಲ್ಲಾ ಹತ್ತಾರು ಪ್ರಶ್ನೆಗಳನ್ನು ಕೇಳಿ ಊರುಗಳಿಗೆ ಹೋದ ತಕ್ಷಣ ಹತ್ತಾರು ಜನರು ಗುಂಪುಗೂಡಿ ಹತ್ತಿರ ಬಂದು ಬಿಡುತ್ತಿದ್ದರು. ದೇವಸ್ಥಾನಗಳ ಫೋಟೋಗಳನ್ನು ಕೂಡ ತೆಗೆಯಲು ಬಿಡುತ್ತಿರಲಿಲ್ಲ. ಇದರಿಂದ ಬೇಸತ್ತು ಹಳ್ಳಿಗಳಿಗೆ ಹೋಗುವುದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದ ಡಾ.ಸಂತೋಷ್, ಹತ್ತಾರು ಸವಾಲುಗಳನ್ನು ದಾಟಿ ಮುಂದುವರಿದರು. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ತಮ್ಮ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟಾಗ ಜನರಿಂದ ಅಗತ್ಯ ಸಹಕಾರ ದೊರೆಯಿತು. ಇದಕ್ಕಾಗಿ ಹಳ್ಳಿಗಳಿಗೆ ಹೋಗುವ ಮೊದಲೇ ಅವರು ಅಲ್ಲಿನ ಹಿರಿಯ ಅಧಿಕಾರಿಗಳು, ಹಾಲು ಉತ್ಪಾದಕ ಸಂಘಗಳು, ಪಂಚಾಯಿತಿ ಸದಸ್ಯರು, ಪೊಲೀಸ್ ಸಿಬ್ಬಂದಿ ಜೊತೆಗೆ ಹೋಗುವ ಬಗ್ಗೆ ತಿಳಿಸಿ ತಮಗೆ ಅಗತ್ಯ ಸಹಕಾರ ಸಹಾಯ ನೀಡುವಂತೆ ಕೇಳಿಕೊಳ್ಳುತ್ತಿದ್ದರು. ಅವರ ಈ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸುತ್ತಿದ್ದರು.
ಬಹಳಷ್ಟು ಕಡೆಗಳಲ್ಲಿ ದೇವಾಲಯಗಳ ಪರಿಚಯವನ್ನು ಅನ್ಯ ಧರ್ಮೀಯರು ಹಾಗೂ ತಳಸಮುದಾಯದ ಜನರು ಅತ್ಯಂತ ಹೆಮ್ಮೆಯಿಂದ ನೀಡಿದ್ದಾರೆ. ಅವರ ಈ ಪ್ರೀತಿ ಅಭಿಮಾನ ವಿಶ್ವಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಕಲೆ ಹಾಕಿದ ಮಾಹಿತಿಯನ್ನು ಬರವಣಿಗೆ ಮೂಲಕ ವಾಟ್ಸಾಪ್,ಫೇಸ್ ಬುಕ್ ಗಳಲ್ಲಿ ಪ್ರಕಟವಾದ ನಂತರ ಜನರು ಇವರನ್ನು ಗುರುತಿಸಿ ತಮ್ಮ ಗ್ರಾಮಗಳಲ್ಲಿ ಹೋದಾಗ ಆದರದಿಂದ ಬರ ಮಾಡಿಕೊಳ್ಳುತ್ತಿದ್ದರು.
ಪ್ರತಿ ಶನಿವಾರ ಮತ್ತು ಭಾನುವಾರ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಬೈಕ್ ಏರಿ ಹೊರಟುಬಿಡುತ್ತಿದ್ದ ಇವರು ಬಿಸಿಲು, ಮಳೆ, ಚಳಿ ಎನ್ನದೆ ಕಚ್ಚಾ ರಸ್ತೆ, ಬೆಟ್ಟ-ಗುಡ್ಡ, ಕಾಡು-ಮೇಡುಗಳನ್ನು ಮಾಹಿತಿ ಕಲೆ ಹಾಕಲು ಅಲೆದಾಡಿದ್ದಾರೆ.
ಅದಕ್ಕಾಗಿ ಲಕ್ಷಗಟ್ಟಲೆ ಇವರ ಸ್ವಂತ ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ.
ವಿವಿಧ ರಾಜ್ಯಮಟ್ಟದ ಪತ್ರಿಕೆಗಳು, ವಿಶೇಷ ಸಂಚಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ 400 ಕ್ಕೂ ಅಧಿಕ ಆರೋಗ್ಯ ಕುರಿತಾದ ಲೇಖನಗಳು ಮತ್ತು 1200 ಕ್ಕೂ ಅಧಿಕ ದೇವಾಲಯಗಳ ಪರಿಚಯಗಳನ್ನು ಪ್ರಕಟಿಸಲಾಗಿದೆ. ಜೊತೆಗೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ಗ್ರಾಮಗಳ ಅಧಿಕೃತ ರಾಜ್ಯ ಮತ್ತು ಪುರಾತತ್ವ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಇವರ ಲೇಖನಗಳಿಂದ ಪಡೆದುಕೊಳ್ಳಲಾಗಿದೆ. ಇದರೊಂದಿಗೆ ಸಂರಕ್ಷಣೆ ಇಲ್ಲದೆ ಅಲ್ಲಲ್ಲಿ ಬಿದ್ದಿರುತ್ತಿದ್ದ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳ ಸಂರಕ್ಷಣೆಗಾಗಿ ಇಲಾಖೆಗಳಿಗೆ ಪತ್ರ ಬರೆದು ಅಧಿಕಾರಿಗಳು ಬೆನ್ನುಬೀಳುವ ಇವರು, ಸ್ವಂತ ಖರ್ಚಿನಲ್ಲಿ 50 ಕ್ಕೂ ಅಧಿಕ ದೇವಾಲಯಗಳ ಹೆಸರಿನ ಬೋರ್ಡ್‌ಗಳನ್ನು ಅಳವಡಿಸಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.
*ಅಂತರರಾಷ್ಟ್ರೀಯ ಮಟ್ಟದ ಗೂಗಲ್ ಪ್ರಶಸ್ತಿ :*
ತಾವು ಭೇಟಿ ನೀಡಿದ ಹಳ್ಳಿಗಳ ಐತಿಹಾಸಿಕ ತಾಣಗಳು ಮತ್ತು ದೇವಾಲಯಗಳ ಅತಿ ಹೆಚ್ಚು ಫೋಟೋಗಳನ್ನು ಸ್ಥಳೀಯ ಗ್ರಾಮಗಳಿಂದಲೇ ಗೂಗಲ್ ಮ್ಯಾಪ್ ಗೆ ಅಪ್ಲೋಡ್ ಮಾಡಿದ ಕಾರಣಕ್ಕಾಗಿ, ಅವರ ಕಾರ್ಯವನ್ನು ಗುರುತಿಸಿ 2018 ರಲ್ಲಿ ಜರ್ಮನಿಯ ಗೂಗಲ್ ಸಂಸ್ಥೆಯು ಇವರಿಗೆ ಪ್ರಶಂಸನಾ ಪತ್ರ ಹಾಗೂ ಪದಕವನ್ನು ನೀಡಿ ಗೌರವಿಸಿದೆ.
ನಿರಂತರ ಶೋಧನೆಯ ಹಾದಿಯಲ್ಲಿರುವ ಡಾ. ಕೆ.ವಿ. ಸಂತೋಷ್ , ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳನ್ನು ಸಂದರ್ಶಿಸುವ ಆಶಯ ವ್ಯಕ್ತಪಡಿಸುತ್ತಾರೆ.

















