ಇಂದಿನ ಆಧುನಿಕ ಜಗತ್ತಿನಲ್ಲಿ ಯಶಸ್ಸು ಎಂದರೆ ಕೇವಲ ಉತ್ತಮ ವೃತ್ತಿಜೀವನವನ್ನು ಹೊಂದುವುದಷ್ಟೇ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಳಿ ಸಾಕಷ್ಟು ಹಣ ಇರಬೇಕು, ಭವಿಷ್ಯ ಸುರಕ್ಷಿತವಾಗಿರಬೇಕು ಮತ್ತು ಜೀವನದಲ್ಲಿ ಸ್ಥಿರತೆ ಇರಬೇಕು ಎಂದು ಬಯಸುತ್ತಾನೆ. ಆದರೆ, ಹಣ ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಮತ್ತು ಬೆಳೆಸುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ನಾವು ಮರೆಯುತ್ತೇವೆ.
ಶತಮಾನಗಳ ಹಿಂದೆಯೇ ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ಆಚಾರ್ಯ ಚಾಣಕ್ಯರು ಜೀವನ ಹಾಗೂ ಹಣದ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನೀತಿಗಳನ್ನು ನೀಡಿದ್ದಾರೆ. ಅವು ಇಂದಿನ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಶ್ರೀಮಂತರಾಗಲು ಚಾಣಕ್ಯರು ನೀಡಿರುವ 5 ಪ್ರಮುಖ ಸೂತ್ರಗಳು ಇಲ್ಲಿವೆ.
1. ಉಳಿತಾಯವೇ ಭವಿಷ್ಯದ ಅತಿ ದೊಡ್ಡ ರಕ್ಷಾಕವಚ
ಚಾಣಕ್ಯರ ಪ್ರಕಾರ, ಗಳಿಕೆಯ ಒಂದು ಭಾಗವನ್ನು ಯಾವಾಗಲೂ ಉಳಿತಾಯ ಮಾಡಬೇಕು. ಇದು ಕೇವಲ ಒಂದು ಅಭ್ಯಾಸವಲ್ಲ, ಬದಲಿಗೆ ಸಂಕಷ್ಟದ ಸಮಯದಲ್ಲಿ ನೆರವಾಗುವ ರಕ್ಷಾಕವಚವಾಗಿದೆ. ಜೀವನದಲ್ಲಿ ಯಾವಾಗ ಕಷ್ಟದ ಸಮಯ ಎದುರಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ನಿಮ್ಮ ಉಳಿತಾಯವೇ ನಿಮ್ಮನ್ನು ಕೈಹಿಡಿಯುತ್ತದೆ. ಇಂದಿನ ಕಾಲದಲ್ಲಿ ಇದನ್ನು ನಾವು ‘ಎಮರ್ಜೆನ್ಸಿ ಫಂಡ್’ (ತುರ್ತು ನಿಧಿ) ಎಂದು ಕರೆಯಬಹುದು. ನಿಮ್ಮ ಆದಾಯ ಎಷ್ಟೇ ಇರಲಿ, ಪ್ರತಿ ತಿಂಗಳು ಸ್ವಲ್ಪ ಭಾಗವನ್ನು ಉಳಿಸುವುದು ಆರ್ಥಿಕ ಸ್ಥಿರತೆಗೆ ಅಡಿಪಾಯವಾಗುತ್ತದೆ.
2. ದುಂದುವೆಚ್ಚದಿಂದ ದೂರವಿರಿ
ಯೋಚಿಸದೆ ಹಣ ಖರ್ಚು ಮಾಡುವ ವ್ಯಕ್ತಿ ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ ಎಂದು ಚಾಣಕ್ಯರು ಸ್ಪಷ್ಟವಾಗಿ ಹೇಳಿದ್ದಾರೆ. ಕೇವಲ ಪ್ರದರ್ಶನಕ್ಕಾಗಿ, ಟ್ರೆಂಡ್ ಫಾಲೋ ಮಾಡಲು ಅಥವಾ ಇತರರನ್ನು ಮೆಚ್ಚಿಸಲು ಮಾಡುವ ಖರ್ಚುಗಳು ದೀರ್ಘಾವಧಿಯಲ್ಲಿ ನಷ್ಟವನ್ನು ಉಂಟುಮಾಡುತ್ತವೆ. ಇಂದಿನ ಆನ್ಲೈನ್ ಶಾಪಿಂಗ್ ಮತ್ತು ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನಾವು ಅಗತ್ಯತೆ ಮತ್ತು ಆಸೆಗಳ ನಡುವಿನ ವ್ಯತ್ಯಾಸವನ್ನು ಮರೆಯುತ್ತಿದ್ದೇವೆ. ಆದ್ದರಿಂದ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ “ಇದು ನಿಜವಾಗಿಯೂ ನನಗೆ ಅಗತ್ಯವಿದೆಯೇ?” ಎಂದು ಸ್ವತಃ ಪ್ರಶ್ನಿಸಿಕೊಳ್ಳುವುದು ಬುದ್ಧಿವಂತಿಕೆ.
3. ಹಣಕ್ಕೆ ಗೌರವ ನೀಡಿ
ಹಣ ಎನ್ನುವುದು ಕೇವಲ ಗಳಿಸುವ ವಸ್ತುವಲ್ಲ, ಅದನ್ನು ಸರಿಯಾಗಿ ನಿರ್ವಹಿಸುವುದು ಒಂದು ಕಲೆ. ಹಣವನ್ನು ಗೌರವಿಸುವ ವ್ಯಕ್ತಿಯ ಬಳಿ ಮಾತ್ರ ಅದು ದೀರ್ಘಕಾಲ ಉಳಿಯುತ್ತದೆ. ಅಂದರೆ ಬಜೆಟ್ ಸಿದ್ಧಪಡಿಸುವುದು, ಖರ್ಚುಗಳ ಮೇಲೆ ನಿಗಾ ಇಡುವುದು ಮತ್ತು ಅನಗತ್ಯ ವಸ್ತುಗಳ ಮೇಲಿನ ವೆಚ್ಚವನ್ನು ನಿಯಂತ್ರಿಸುವುದು ಹಣಕ್ಕೆ ನೀಡುವ ಗೌರವವಾಗಿದೆ. ನಮ್ಮ ಸಣ್ಣಪುಟ್ಟ ನಿರ್ಲಕ್ಷ್ಯಗಳೇ ಮುಂದೆ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ.
4. ಆದಾಯದ ಒಂದಕ್ಕಿಂತ ಹೆಚ್ಚು ಮೂಲಗಳನ್ನು ಸೃಷ್ಟಿಸಿ
ಕೇವಲ ಒಂದೇ ಆದಾಯದ ಮೂಲವನ್ನು ನಂಬಿಕೊಂಡಿರುವುದು ಅಪಾಯಕಾರಿ ಎಂಬುದು ಚಾಣಕ್ಯರ ಅಭಿಪ್ರಾಯವಾಗಿತ್ತು. ಯಾವುದೇ ಕಾರಣದಿಂದ ಆ ಒಂದು ಮೂಲ ಸ್ಥಗಿತಗೊಂಡರೆ, ಇಡೀ ಆರ್ಥಿಕ ವ್ಯವಸ್ಥೆಯೇ ಹದಗೆಡಬಹುದು. ಇಂದಿನ ದಿನಗಳಲ್ಲಿ ಇದು ಬಹಳ ಮುಖ್ಯವಾಗಿದೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಫ್ರೀಲ್ಯಾನ್ಸಿಂಗ್, ಪಾರ್ಟ್-ಟೈಮ್ ಕೆಲಸ ಅಥವಾ ಹೂಡಿಕೆಗಳ (Investments) ಮೂಲಕ ಹೆಚ್ಚುವರಿ ಆದಾಯದ ಮಾರ್ಗಗಳನ್ನು ಕಂಡುಕೊಳ್ಳಬೇಕು. ಇದು ನಿಮ್ಮನ್ನು ಸುರಕ್ಷಿತವಾಗಿಡುವುದಲ್ಲದೆ, ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸಲು ನೆರವಾಗುತ್ತದೆ.
5. ಜ್ಞಾನವೇ ಅತಿ ದೊಡ್ಡ ಹೂಡಿಕೆ
ಚಾಣಕ್ಯರ ಪ್ರಕಾರ, ಜಗತ್ತಿನ ಅತ್ಯಂತ ಸುರಕ್ಷಿತ ಹೂಡಿಕೆ ಎಂದರೆ ಅದು ಜ್ಞಾನ. ಹಣವು ಎಂದಿಗೂ ಕರಗಿ ಹೋಗಬಹುದು ಅಥವಾ ಕಳುವಾಗಬಹುದು, ಆದರೆ ನಿಮ್ಮ ಜ್ಞಾನವು ನಿಮ್ಮನ್ನು ಮತ್ತೆ ಶೂನ್ಯದಿಂದ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಹೊಸ ಕೌಶಲ್ಯಗಳನ್ನು ಕಲಿಯುವುದು, ಬದಲಾಗುತ್ತಿರುವ ಸಮಯಕ್ಕೆ ತಕ್ಕಂತೆ ನಿಮ್ಮನ್ನು ಅಪ್ಡೇಟ್ ಮಾಡಿಕೊಳ್ಳುವುದು ನಿಮ್ಮನ್ನು ಆರ್ಥಿಕವಾಗಿ ಮತ್ತಷ್ಟು ಬಲಶಾಲಿಯನ್ನಾಗಿ ಮಾಡುತ್ತದೆ.


















