Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏಪ್ರಿಲ್ 23-24ರಂದು ಸಿಇಟಿ ಪರೀಕ್ಷೆ: ಚಿತ್ರದುರ್ಗದಲ್ಲಿ 16 ಕೇಂದ್ರಗಳು, 6640 ವಿದ್ಯಾರ್ಥಿಗಳು ಸಜ್ಜು

---Advertisement---

ಚಿತ್ರದುರ್ಗ. ಏ.18: ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಇದೇ ಏಪ್ರಿಲ್ 23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ ನಗರದ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 6640 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಅತ್ಯಂತ ವ್ಯವಸ್ಥಿತ ಹಾಗೂ ಸುಗಮವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಾಮಾನ್ಯ ಪ್ರವೇಶ ಪರೀಕ್ಷಾ ಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಬೆಳಕು ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರಬೇಕು. ವಿಶೇಷವಾಗಿ ವಿಕಲಚೇತನ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೆಲಮಹಡಿಯಲ್ಲೇ ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಪ್ರಸ್ತುತ ಬಿಸಿಲಿನ ತಾಪ ಹೆಚ್ಚಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರಗಳಲ್ಲಿ ನೆರಳಿನ ವ್ಯವಸ್ಥೆ ಹಾಗೂ ಅಗತ್ಯವಿದ್ದರೆ ಶಾಮಿಯಾನಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 

ಕೆಇಎ ನಿಯಮದಂತೆ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‍ಕಾಸ್ಟಿಂಗ್ ಮೂಲಕ ನಿಗಾ ಇಡಲಾಗುವುದು. ಪ್ರತಿ ಕಾಲೇಜಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಅವರು ಪರೀಕ್ಷಾ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಲಿದ್ದಾರೆ. ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಾಗಾಟ ಹಾಗೂ ಸಂಗ್ರಹಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 

ಏಪ್ರಿಲ್ 23 ಮತ್ತು 24ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಹಿನ್ನಲೆಯಲ್ಲಿ ಪರೀಕ್ಷೆಗಳು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಬೇಕೆಂದು ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಗಳನ್ನು ಶಾಂತ ವಾತವಾರಣದಲ್ಲಿ ನಡೆಸಲು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದ ಸುತ್ತಲು ನಿಷೇಧಿತ ಪ್ರದೇಶವೆಂದು ಈಗಾಗಲೇ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನುಗಳನ್ನು ತರುವುದು ಹಾಗೂ ಕೈ ಗಡಿಯಾರವನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯವರು ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ಫೋನುಗಳನ್ನು ತರುವುದನ್ನು ಹಾಗೂ ಕೈಗಡಿಯಾರ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ ಅವರು, ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ, ಪರೀಕ್ಷಾ ಕಾರ್ಯವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

 

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ತಿಮ್ಮಯ್ಯ ಮಾತನಾಡಿ, ಇದೇ ಏಪ್ರಿಲ್ 23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ ನಗರದ ಎಸ್‍ಆರ್‍ಎಸ್ ಪಿಯು ಕಾಲೇಜು, ಕೆಎಂಎಸ್ ಪಿಯು ಕಾಲೇಜು, ಎಸ್‍ಜೆಎಂ ಪಿಯು ಕಾಲೇಜು, ನಮ್ಮ ಎಕ್ಸ್‍ಫರ್ಟ್ ಪಿಯು ಕಾಲೇಜು, ಎಸ್‍ಜೆಎಂ ಪಿಯು ಕಾಲೇಜು, ಚಿನ್ಮೂಲಾದ್ರಿ ಪಿಯು ಕಾಲೇಜು, ಚೈತನ್ಯ ಪಿಯು ಕಾಲೇಜು, ವಾಸವಿ ಪ್ರೌಢಶಾಲೆ, ವೆಸ್ಟರ್ನ್ ಹಿಲ್ಸ್ ಪಿಯು ಕಾಲೇಜು, ಶ್ರೀ ಕಂಪಳರಂಗ ಪಿಯು ಕಾಲೇಜು, ಸೇಂಟ್ ಜೋಸೆಫ್ ಪಿಯು ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು, ಬಾಲಕರ ಸರ್ಕಾರಿ ಪಿಯು ಕಾಲೇಜು, ಬಾಲಕಿಯರ ಸರ್ಕಾರಿ ಪಿಯು ಕಾಲೇಜು,  ಎಸ್‍ಜೆಎಂಐಟಿ ಹಾಗೂ ಮಹಾರಾಣಿ ಪದವಿಪೂರ್ವ ಕಾಲೇಜು ಸೇರಿದಂತೆ ಒಟ್ಟು 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 6640 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

 

ಏಪ್ರಿಲ್ 23ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ  ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ 3:50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 24ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ ಗಣಿತಶಾಸ್ತ್ರ ಮತ್ತು ಮಧ್ಯಾಹ್ನ 2:30 ರಿಂದ 3:50 ರವರೆಗೆ ಜೀವಶಾಸ್ತ್ರ ಪರೀಕ್ಷೆ ಜರುಗಲಿದೆ. ಯಾವುದೇ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕೇಂದ್ರಗಳು ಇರುವುದಿಲ್ಲ ಎಂದು ಮಾಹಿತಿ ನೀಡಿದರು.

 

ಪರೀಕ್ಷಾ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆಗಾಗಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡುವ ಕುರಿತು ಆರೋಗ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕು. ಪರೀಕ್ಷೆಗೆ ಬರುವ ಅಭ್ಯರ್ಥಿಗಳ Facial Recognition ಮಾಡಲು ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರು ಕ್ರಮವಹಿಸಬೇಕು. ಪರೀಕ್ಷಾ ನಡೆಯುವ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿಟಿವಿ ವೀಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಬೇಕು.  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಿಗಾಗಿ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಪ್ರಕಟಿಸಿದ್ದು, ಅಭ್ಯರ್ಥಿಗಳು ವಸ್ತ್ರಸಂಹಿತೆಯ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಡ್ರೆಸ್ ಕೋಡ್ ಸಮಸ್ಯೆ ಆಗದ ರೀತಿ ಗಮನಿಸಲು ಹಿರಿಯ ಉಪನ್ಯಾಸಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

 

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸೋಮಶೇಖರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮ ಹಾನಗಲ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ರೇಖಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now