ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಿತ್ರದುರ್ಗದ ಕೇಂದ್ರಿಯ ವಿದ್ಯಾಶಾಲೆ ಕೊನೆಗೂ ಪ್ರಾರಂಭಗೊಂಡಿದೆ, 2026-27 ನೇ ಶೈಕ್ಷಣಿಕ ಸಾಲಿಗೆ 1 ನೇ ತರಗತಿಯಿಂದ 5 ನೇ ತರಗತಿಯವರೆಗೆ ದಾಖಲಾತಿಗಾಗಿ ಪ್ರವೇಶಕ್ಕೆ ಅರ್ಜಿಗಳು ಇಂದಿನಿಂದ (ಮಾರ್ಚ್. 23) ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರೀಯ ವಿದ್ಯಾಶಾಲೆಯ ಕೇಂದ್ರ ಕಛೇರಿಯಿಂದ ಅಧೀಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ವಿಭಾಗದಲ್ಲಿ ತಾತ್ಕಾಲಿಕವಾಗಿ ಕೇಂದ್ರೀಯಾ ವಿದ್ಯಾಶಾಲೆ ಕಾರ್ಯಾರಂಭ ಮಾಡಲಿದೆ.
ಕೇಂದ್ರೀಯ ವಿದ್ಯಾಶಾಲೆಯು ವಸತಿರಹಿತ ಶಾಲೆಯಾಗಿದ್ದು, ಯಾವುದೇ ಹಾಸ್ಟೆಲ್ ವ್ಯವಸ್ಥೆ ಇರುವುದಿಲ್ಲ. ಸದ್ಯ ಚಿತ್ರದುರ್ಗದ ಕೇಂದ್ರೀಯಾ ವಿದ್ಯಾಶಾಲೆಯಲ್ಲಿ 1 ನೇ ತರಗತಿಯಿಂದ 5 ನೇ ತರಗತಿಯವರೆಗೆ ಮಾತ್ರ ದಾಖಲಾತಿಗೆ ಅವಕಾಶವಿದ್ದು, 1 ನೇ ತರಗತಿಯ ಮಕ್ಕಳಿಗೆ ಪ್ರವೇಶಕ್ಕಾಗಿ ಪೋಷಕರು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಸಬಹುದಾಗಿದೆ.

1 ನೇ ತರಗತಿಗೆ ದಿನಾಂಕ 20.03.2026 ರಿಂದ 02.04.2026 ರವರೆಗೆ admission.Kvs.gov.in ವೆಬ್‍ಸೈಟ್ ಮೂಲಕ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2 ನೇ ತರಗತಿಯಿಂದ 5 ನೇ ತರಗತಿಯಯವರೆಗೆ ಆಫ್‍ಲೈನ್ ಮೂಲಕ ಖುದ್ದಾಗಿ ಪೋಷಕರು ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ, 2 ನೇ ತರಗತಿಯಿಂದ 5 ನೇ ತರಗತಿಯ ಮಕ್ಕಳಿಗೆ ದಿನಾಂಕ 02.04.2026 ರ ಬೆಳಿಗ್ಗೆ 10.00 ಗಂಟೆಯಿಂದ 08.04.2026 ರ ಸಂಜೆ 4.00 ಗಂಟೆಯವರೆಗೆ ಖುದ್ದಾಗಿ ಬಂದು ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ. ಆಯ್ಕೆಯಾದ ಮಕ್ಕಳಿಗೆ ದಾಖಲಾಗಲು ಕೊನೆಯ ದಿನಾಂಕ 30.06.2026 ಆಗಿರುತ್ತದೆ. 1 ನೇ ತರಗತಿಯಿಂದ 5 ನೇ ತರಗತಿಯವರೆಗೆ ಪ್ರತಿ ತರಗತಿಗೆ 40 ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ ಎಂದು ಸಂಸದ ಗೋವಿಂದ ಕಾರಜೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















