ಸುದ್ದಿಒನ್, ಹಿರಿಯೂರು, ನವೆಂಬರ್. 21 : ಮುಖ್ಯಮಂತ್ರಿ ಅವರ ಗೃಹ ಕಚೇರಿ ನಿರ್ಮಾಣಕ್ಕೆ ₹100 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲೇ ತನಿಖಾ ಸಮಿತಿ ರಚಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಕಚೇರಿ ವೆಚ್ಚದ ಕುರಿತು ಆರೋಪ ಮಾಡುವವರು ದಾಖಲೆಗಳ ಆಧಾರದಲ್ಲಿ ಚರ್ಚೆಗೆ ಬರಲಿ ಎಂದು ಪ್ರತಿಪಕ್ಷಗಳಿಗೆ ಆಹ್ವಾನ ನೀಡಿದರು.
ಐವರು ಸದಸ್ಯರ ತನಿಖಾ ಸಮಿತಿ ರಚನೆಗೆ ಆಹ್ವಾನ
ಗೃಹ ಕಚೇರಿಗೆ ₹100 ಕೋಟಿ ಖರ್ಚು ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಸಿಎಂ ಶಿವಕುಮಾರ್, ತನಿಖಾ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇರಬಾರದು ಎಂಬ ಷರತ್ತು ವಿಧಿಸಿದರು. ಜೆಡಿಎಸ್, ಬಿಜೆಪಿ, ಎನ್ಡಿಎ ಹಾಗೂ ಪಕ್ಷೇತರ ಶಾಸಕರನ್ನು ಒಳಗೊಂಡ ಐವರು ಸದಸ್ಯರ ತಂಡ ರಚಿಸಿಕೊಳ್ಳಲಿ. ವಿಜಯೇಂದ್ರ ಅವರೇ ಸಮಿತಿಯ ನೇತೃತ್ವ ವಹಿಸಲಿ ಎಂದು ಹೇಳಿದರು.
ಸಮಿತಿಯು ಎಲ್ಲ ಖರ್ಚು-ವೆಚ್ಚಗಳ ದಾಖಲೆಗಳನ್ನು ಪರಿಶೀಲಿಸಿ, ₹100 ಕೋಟಿ ಎಲ್ಲಿ ಮತ್ತು ಹೇಗೆ ಖರ್ಚಾಗಿದೆ ಎಂಬುದರ ಕುರಿತು ವರದಿ ಸಿದ್ಧಪಡಿಸಬೇಕು. ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ವರದಿ ಮಂಡಿಸಿ ಚರ್ಚೆ ನಡೆಸಲಿ. ಎರಡು ದಿನಗಳೊಳಗೆ ಸಮಿತಿ ಸದಸ್ಯರ ಹೆಸರುಗಳನ್ನು ನೀಡುವಂತೆ ಅವರು ಸವಾಲು ಹಾಕಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಜಾಸೇವಾ ಕಾರ್ಯಕ್ರಮ ಸರ್ಕಾರದ ಜನಸಂಪರ್ಕ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು, ಪ್ರತಿ ತಿಂಗಳು ಎರಡು ಶನಿವಾರ ಜನರ ಬಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ಸಚಿವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾವೂ ಪ್ರತಿ ತಿಂಗಳು ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಕಡ್ಡಾಯವಾಗಿ ಭೇಟಿ ನೀಡುವುದಾಗಿ ತಿಳಿಸಿದರು. ಜನರ ಸಮಸ್ಯೆಗಳನ್ನು ಪರಿಹರಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಪ್ರಜಾಸೇವಾ ಇಲಾಖೆಯಡಿ ಹಲವು ಯೋಜನೆಗಳನ್ನು ತರಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಸಾರ್ವಜನಿಕರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುವುದು. ಸರ್ಕಾರಿ ನೌಕರರ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ವಿಚಾರದಲ್ಲಿ ಕೇಂದ್ರಕ್ಕೆ ಟಾಂಗ್
ಹಿರಿಯೂರಿನಲ್ಲಿ ₹2,000 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ಚುನಾವಣಾ ಗಿಮಿಕ್ ಎಂದು ಟೀಕಿಸಿರುವ ಪ್ರತಿಪಕ್ಷಗಳಿಗೆ ಉತ್ತರಿಸಿದ ಸಿಎಂ ಡಿಕೆ ಶಿವಕುಮಾರ್, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ ಎಂದರು. ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ದೊರಕಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಕಳೆದ 9-10 ವರ್ಷಗಳಿಂದ ಕೇಂದ್ರವು ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಿಲ್ಲ ಎಂದು ಆರೋಪಿಸಿದರು. ಆದರೂ ರಾಜ್ಯದ ಸಚಿವರು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮಾತುಕತೆ ನಡೆಸಿ ರೈತರಿಗೆ ನ್ಯಾಯಯುತ ಬೆಲೆ ಕೊಡಿಸಲು ಪ್ರಯತ್ನಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ಗೋ ರಕ್ಷಣೆಗೆ ಬದ್ಧ, ಕಾನೂನು ದುರುಪಯೋಗಕ್ಕೆ ಅವಕಾಶವಿಲ್ಲ : ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೂ ತನ್ನದೇ ಆದ ಸಿದ್ಧಾಂತಗಳಿವೆ. ಗೋವುಗಳ ಬಗ್ಗೆ ಅಪಾರ ಗೌರವವಿದ್ದು, ಅವುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಆದರೆ ಕಾನೂನನ್ನು ದುರುಪಯೋಗಪಡಿಸಿಕೊಂಡು ಇತರರ ವಿರುದ್ಧ ದ್ವೇಷ ಸಾಧಿಸಲು ಅಥವಾ ಜನರ ಬದುಕಿಗೆ ತೊಂದರೆ ಉಂಟುಮಾಡಲು ಅವಕಾಶ ನೀಡುವುದಿಲ್ಲ ಎಂದರು. ಗೋ ರಕ್ಷಣೆಯ ಬಗ್ಗೆ ಮಾತನಾಡುವ ಉತ್ತರ ಪ್ರದೇಶದಲ್ಲಿಯೇ ದೊಡ್ಡ ಪ್ರಮಾಣದ ಮಾಂಸ ರಫ್ತು ಕಂಪನಿಗಳಿವೆ. ಮೊದಲು ಅವುಗಳನ್ನು ಮುಚ್ಚಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಇದೇ ವೇಳೆ, ಹೊಸ ಅನುಭವ ಮಂಟಪ ಕಾಮಗಾರಿಯ ಗುತ್ತಿಗೆದಾರ ರವಿ ಬಂಧನದ ಬಗ್ಗೆ ತಮಗೆ ಇನ್ನೂ ಸಂಪೂರ್ಣ ಮಾಹಿತಿ ಬಂದಿಲ್ಲ. ಮಾಹಿತಿ ಪಡೆದುಕೊಂಡ ಬಳಿಕ ಪ್ರತಿಕ್ರಿಯಿಸುವುದಾಗಿ ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.












