ನವದೆಹಲಿ: ದೇಶದ ಆಂತರಿಕ ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಗಂಭೀರ ಧಕ್ಕೆ ತರುತ್ತಿದ್ದ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ (SBN) ಅನ್ನು ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ’ ನೀತಿಯಡಿಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವರ ಕಾರ್ಯಾಲಯ, ಈ ಜಾಲವು ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ಮಾದಕ ವಸ್ತುಗಳನ್ನು ದೇಶದೊಳಗೆ ಕಳ್ಳಸಾಗಣೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದೆ. ಮುಗ್ಧ ಯುವಕರು ಮತ್ತು ಸ್ಥಳೀಯ ಸಣ್ಣಪುಟ್ಟ ಅಪರಾಧಿಗಳನ್ನು ಆಮಿಷಗಳ ಮೂಲಕ ಸೆಳೆದು, ಅವರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ತಳ್ಳುವುದು ಈ ಸಂಘಟನೆಯ ಮುಖ್ಯ ಸಂಚಾಗಿದೆ.
ಅಲ್ಲದೆ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿಯನ್ನು ಕದಡುವ ಉದ್ದೇಶದಿಂದ ಈ ಸಿಂಡಿಕೇಟ್ ವಿವಿಧ ಡಿಜಿಟಲ್ ಸಂವಹನ ವೇದಿಕೆಗಳ ಮೂಲಕ ನಿರಂತರವಾಗಿ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿತ್ತು. ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಈ ಸಂಘಟನೆ ನೇರ ಸವಾಲೊಡ್ಡಿದ್ದರಿಂದ, ಇದರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ನಿಷೇಧದ ಆದೇಶ ಹೊರಡಿಸಿದೆ.











