ಚಿತ್ರದುರ್ಗ .ಜೂ.19: ಯುವಜನತೆಗೆ ಕೇವಲ ಉದ್ಯೋಗದ ಆಶ್ವಾಸನೆ ನೀಡದೆ, ಅವರ ಕೈಗಳಿಗೆ ನೇರವಾದ ಶಕ್ತಿ ತುಂಬುವುದು ‘ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯುವಜನರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಇಪಿಎಫ್‌ಒ ಪ್ರಾದೇಶಿಕ ಕಚೇರಿ ಬಳ್ಳಾರಿ ವತಿಯಿಂದ, ನಗರದ ಎಸ್‌ಜೆಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿವಿಲ್ ವಿಭಾಗದ ಸರ್.ಎಂ.ವಿ. ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ‘ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ’ ಫಲಾನುಭವಿಗಳಿಗೆ ಪ್ರೋತ್ಸಾಹ ಸೌಲಭ್ಯಗಳ ವಿತರಿಸಿ ಅವರು ಮಾತನಾಡಿದರು.
ಯುವಕರಿಗೆ ಮತ್ತು ಉದ್ಯೋಗದಾತ ಕಂಪನಿಗಳಿಗೆ ಉತ್ತೇಜನ ನೀಡಲು ಸರ್ಕಾರ ಈ ಯೋಜನೆ ರೂಪಿಸಿದೆ. ಹೊಸದಾಗಿ ಉದ್ಯೋಗ ಪಡೆಯುವ ಯುವಕರಿಗೆ ಆರು ತಿಂಗಳ ಅಂತರದಲ್ಲಿ ಎರಡು ಕಂತುಗಳಲ್ಲಿ ಒಟ್ಟು ರೂ.15,000 ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಳ್ಳಿಯಿಂದ ಓದು ಮುಗಿಸಿ ಉದ್ಯೋಗ ಹುಡುಕಿಕೊಂಡು ಮೊದಲ ಬಾರಿಗೆ ಪಟ್ಟಣಗಳಿಗೆ ವಲಸೆ ಹೋಗುವ ಯುವಕರಿಗೆ ಮೊದಲ ತಿಂಗಳು ಸಂಬಳ ಇರುವುದಿಲ್ಲ. ಅಂತಹವರಿಗೆ ನೆರವಾಗಲು ಮೋದಿ ಸರ್ಕಾರ ಮೊದಲ ತಿಂಗಳ ಖರ್ಚು-ವೆಚ್ಚಕ್ಕಾಗಿ ಅವರ ಖಾತೆಗೆ ರೂ.15,000 ಜಮಾ ಮಾಡಲಿದೆ. ಇದರೊಂದಿಗೆ ಹೊಸ ಉದ್ಯೋಗಿಗಳಿಗೆ ಕೆಲಸ ನೀಡುವ ಕಂಪನಿಗಳಿಗೆ ಎರಡು ವರ್ಷಗಳ ಅವಧಿಗೆ ಪ್ರತಿ ತಿಂಗಳು ಕನಿಷ್ಠ ರೂ.3,000 ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಕೇಂದ್ರ ಸರ್ಕಾರ ರೂ.99,446 ಕೋಟಿ ಹಣವನ್ನು ಮೀಸಲಿಟ್ಟಿದೆ. 2027ರ ಅಂತ್ಯದ ವೇಳೆಗೆ ದೇಶದಲ್ಲಿ 3.5 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಯೋಜನೆ ಆರಂಭವಾದಾಗಿನಿAದ ಇದುವರೆಗೆ ಸುಮಾರು 15 ಲಕ್ಷ ಉದ್ಯೋಗಗಳನ್ನು ಒದಗಿಸಲಾಗಿದೆ ಎಂದು ಗೋವಿಂದ ಎಂ ಕಾರಜೋಳ ಹೇಳಿದರು.
ಜಿಲ್ಲೆಯ ಉದ್ಯಮಿಗಳು, ಸಣ್ಣ ಕೈಗಾರಿಕೆಗಳ ಮಾಲೀಕರು ಮತ್ತು ನವೋದ್ಯಮಿಗಳು ತಮ್ಮ ಉದ್ಯೋಗಗಳನ್ನು ವಿಸ್ತರಿಸಿ, ನಮ್ಮ ಜಿಲ್ಲೆಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕು. ಕೇಂದ್ರ ಸರ್ಕಾರ ಸದಾ ನಿಮ್ಮ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಮುಂದಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿ:
ಮುಂಬರುವ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಅಧಿಕೃತವಾಗಿ ಅಂಗೀಕಾರಗೊಳ್ಳಲಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಕ್ರಾಂತಿಕಾರಿ ಕಾಯ್ದೆಯಿಂದಾಗಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ದೊರೆಯಲಿದ್ದು, ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯವು ಹೆಚ್ಚೂಕಡಿಮೆ ಶೇ. 50 ರಷ್ಟಕ್ಕೆ ಏರಿಕೆಯಾಗಲಿದೆ. ಇದು ಲಿಂಗಭೇದದ ವಿರುದ್ಧ ಬಸವಣ್ಣನವರ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಸುದೀರ್ಘ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾಗಲಿದೆ ಎಂದು ಗೋವಿಂದ ಎಂ ಕಾರಜೋಳ ಬಣ್ಣಿಸಿದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಮಾತನಾಡಿ, ಪಿಎಂ-ವಿಬಿಆರ್‌ವೈ ಅಡಿ ಉದ್ಯೋಗದಾತರಿಗೂ (ಮಾಲೀಕರಿಗೆ) ಮತ್ತು ಉದ್ಯೋಗಿಗಳಿಗೆ (ಕೆಲಸಗಾರರಿಗೆ) ಇಬ್ಬರಿಗೂ ಇನ್ಸೆಂಟಿವ್ (ಪ್ರೋತ್ಸಾಹಧನ) ಸಿಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಉತ್ಪಾದನಾ ವಲಯಗಳಲ್ಲಿ ಉತ್ತಮ ಮತ್ತು ನುರಿತ ಉದ್ಯೋಗಿಗಳು ದೊರೆತರೆ ಆ ಸಂಸ್ಥೆಯ ಉತ್ಪಾದಕತೆ ಹೆಚ್ಚಾಗುತ್ತದೆ. ಇದರೊಂದಿಗೆ ದೇಶದ ರಾಷ್ಟ್ರೀಯ ಉತ್ಪಾದಕತೆ ಹಾಗೂ ಆರ್ಥಿಕತೆಯೂ ಕೂಡ ಬಲಿಷ್ಠಗೊಳ್ಳುತ್ತದೆ. ಉದ್ಯೋಗದಾತರು ಮತ್ತು ಉದ್ಯೋಗಿಗಳು ಈ ಯೋಜನೆಯ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಡಾ. ಕೆ. ಬಿ. ಗುಡಸಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೊದಲ ಬಾರಿ ಉದ್ಯೋಗಕ್ಕೆ ಸೇರಿ ಇಪಿಎಫ್‌ಓ ಖಾತೆ ಹೊಂದಿದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ವಿತರಣೆ ಪ್ರಮಾಣ ಪತ್ರಗಳನ್ನು ಸಂಸದ ಗೋವಿಂದ ಎಂ ಕಾರಜೋಳ ವಿತರಿಸಿದರು. ನಂತರ ನವದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸದಾಗಿ ಉದ್ಯೋಗಕ್ಕೆ ಸೇರಿದ ಅರ್ಹ ಉದ್ಯೋಗಿಗಳಿಗೆ ಪ್ರೋತ್ಸಾಹ ಸೌಲಭ್ಯ ವಿತರಣೆ ಮಾಡಿದ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲಾಯಿತು.
ಎಸ್‌ಜೆಎಂಐಟಿ ಪ್ರಾಂಶುಪಾಲ ಡಾ. ಭರತ್ .ಪಿ.ಬಿ., ಎಪಿಎಫ್‌ಓ ವಲಯ ಆಯುಕ್ತ ಹಂಸರಾಜ್, ಬಳ್ಳಾರಿ ವಲಯ ಕಚೇರಿ ಪಿ.ರವಿಕೃಷ್ಣ, ಚನ್ನವೀರಣ್ಣ, ಮಹಮದ್ ಶಫಿ, ಜಲತಜ್ಞ ದೇವರಾಜ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.














