ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ಸರ್ಕಾರದ ಆದೇಶವಿದ್ದರೂ ಕನ್ನಡ ನಾಮಫಲಕಗಳನ್ನು ಅಳವಡಿಸದಿರುವ ಅಂಗಡಿ ಮುಂಗಟ್ಟುಗಳ ಪರವಾನಗಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಚುನಾವಣಾ ಶಾಖೆಯ ತಹಶೀಲ್ದಾರ್ ಬೀಬಿ ಫಾತಿಮರವರಿಗೆ ಮನವಿ ಸಲ್ಲಿಸಿದರು.
ನಗರಸಭೆ ಹಾಗೂ ಇನ್ನಿತರೆ ಇಲಾಖೆಗಳಿಂದ ಪರವಾನಗಿ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವವರು ಶೇ.60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆಂಬ ನಿಯಮವಿದ್ದರೂ ಪಾಲನೆ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆ, ಶಾಲಾ-ಕಾಲೇಜು, ಸಂಘ ಸಂಸ್ಥೆಗಳು, ಎಂಟರ್ ಪ್ರೈಸಸ್ ಕಚೇರಿಗಳು ಕನ್ನಡ ನಾಮಫಲಕಗಳನ್ನು ಹಾಕಬೇಕೆಂದು ಹಲವಾರು ಬಾರಿ ಮನವಿ ಮಾಡಿದ್ದೇವೆ. ನಗರಸಭೆ ಪೌರಾಯುಕ್ತರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೆ ಎಚ್ಚೆತ್ತುಕೊಂಡು ಕನ್ನಡ ನಾಮಫಲಕಗಳ ಅಳವಡಿಕೆಗೆ ಸೂಚಿಸಬೇಕು. ಇಲ್ಲವಾದಲ್ಲಿ ನ.1 ಕನ್ನಡ ರಾಜ್ಯೋತ್ಸವದಂದು ವಿನೂತನವಾಗಿ ಪ್ರತಿಭಟಿಸಲಾಗುವುದೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಶೇ.60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸದಿರುವ ಅಂಗಡಿ ಮಾಲೀಕರುಗಳ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಬೇಕು. ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಕನ್ನಡ ಪರ ಸಂಘಟನೆಗಳನ್ನು ದೂರವಿಟ್ಟು ಜಿಲ್ಲಾಡಳಿತ ಕಳೆದ 15 ರಂದು ಸಭೆ ನಡೆಸಿ ಹೋರಾಟಗಾರರಿಗೆ ಅವಮಾನ ಮಾಡಿದೆ. ಮತ್ತೊಮ್ಮೆ ಸಭೆ ಕರೆದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಕುರಿತು ಚರ್ಚಿಸುವಂತೆ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್, ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು ಅಣ್ಣಪ್ಪ, ತಿಪ್ಪೇಸ್ವಾಮಿ, ವಿಜಯಬಾಬು, ಅವಿನಾಶ್, ಅಖಿಲೇಶ್, ಶಶಿ, ನಾಗೇಶ್, ನಿಸಾರ್ ಅಹಮದ್ ಇವರುಗಳು ಈ ಸಂದರ್ಭದಲ್ಲಿದ್ದರು.
