ದಾವಣಗೆರೆ.ಜೂನ್.30: ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (ಆಪರೇಷನ್ ಥಿಯೇಟರ್) ಇದ್ದಕ್ಕಿದ್ದಂತೆ ಆಕ್ಸಿಜನ್ ಸಿಲಿಂಡರ್ ಒಂದು ಸ್ಫೋಟಗೊಂಡಿದ್ದು, ಪರಿಣಾಮವಾಗಿ ಇಡೀ ಆವರಣದಲ್ಲಿ ತೀವ್ರ ಬೆಂಕಿ ಕಾಣಿಸಿಕೊಂಡಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಇಡೀ ಆಸ್ಪತ್ರೆಯಾದ್ಯಂತ ದಟ್ಟವಾದ ಹೊಗೆ ಆವರಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಲ್ಲಿ ಕೆಲಕಾಲ ತೀವ್ರ ಆತಂಕ ಮತ್ತು ದಿಗಿಲು ಸೃಷ್ಟಿಸಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಜಿಲ್ಲಾಸ್ಪತ್ರೆಗೆ ಧಾವಿಸಿದ್ದು, ಘಟನಾ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.







