ಬೆಂಗಳೂರು, ಮಾ. 28 : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಕಾಂಗ್ರೆಸ್ ಪಕ್ಷವು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಒಟ್ಟು 40 ಮಂದಿ ಪ್ರಮುಖ ನಾಯಕರಿಗೆ ಪ್ರಚಾರ ಜವಾಬ್ದಾರಿ ನೀಡಲಾಗಿದೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಎಚ್. ವೈ. ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಸ್ಪರ್ಧಿಸುತ್ತಿದ್ದು, ಬಿಜೆಪಿಯಿಂದ ಟಿ. ಶ್ರೀನಿವಾಸ್ ದಾಸಕರಿಯಪ್ಪ ಅಭ್ಯರ್ಥಿಯಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್ನಿಂದ ಉಮೇಶ್ ಮೇಟಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಂಸದ ಡಾ. ಸೈಯದ್ ನಾಸೀರ್ ಹುಸೇನ್, ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಹಲವು ಸಚಿವರು ಮತ್ತು ಹಿರಿಯ ನಾಯಕರು ಸ್ಥಾನ ಪಡೆದಿದ್ದಾರೆ.
ಇದಲ್ಲದೆ ಕೆ.ಜೆ. ಜಾರ್ಜ್, ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಕೆ.ಎಚ್. ಮುನಿಯಪ್ಪ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಸಚಿವರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಈ ಉಪ ಚುನಾವಣೆಗಳು ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.













