Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING :  ಎಂ.ಕೆ. ಸ್ಟಾಲಿನ್ ರನ್ನು ಸೋಲಿಸಿದ್ದ ತಮಿಳುನಾಡು ಶಾಸಕ ವಿ.ಎಸ್. ಬಾಬು ನಿಧನ

BREAKING: Tamil Nadu MLA V.S. Babu passes away
---Advertisement---

ಚೆನ್ನೈ: ತಮಿಳುನಾಡಿನ ಕೊಲತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪರಾಭವಗೊಳಿಸಿ ಗಮನ ಸೆಳೆದಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ವಿ.ಎಸ್. ಬಾಬು (75) ಗುರುವಾರ (ನವೆಂಬರ್ 19) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವಿ.ಎಸ್. ಬಾಬು ಅವರನ್ನು ಕಳೆದ ಸೆಪ್ಟೆಂಬರ್ 9ರಂದು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ನಿರಂತರ ಪ್ರಯತ್ನ ನಡೆಸಿದರೂ ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಾ ಬಂದಿತ್ತು. ಗುರುವಾರ ಮಧ್ಯಾಹ್ನ 2.14ಕ್ಕೆ ಅವರಿಗೆ ಹೃದಯ ಸ್ತಂಭನವಾಗಿದ್ದು, ಮಧ್ಯಾಹ್ನ 2.24ಕ್ಕೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ದುಃಖದ ಈ ಸಮಯದಲ್ಲಿ ಬಾಬು ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಆಸ್ಪತ್ರೆ ಸಂತಾಪ ಸೂಚಿಸಿದೆ.

ವಿ.ಎಸ್. ಬಾಬು ಅವರ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡು, ಜನರ ನಡುವೆ ಒಬ್ಬರಾಗಿ ಬದುಕಿ ಎಲ್ಲರ ಪ್ರೀತಿ, ಬೆಂಬಲ ಮತ್ತು ವಿಶ್ವಾಸ ಗಳಿಸಿದ್ದ ವಿ.ಎಸ್. ಬಾಬು ಅವರ ಹಠಾತ್ ನಿಧನವು ತುಂಬಲಾರದ ನಷ್ಟವಾಗಿದೆ ಎಂದು ಬಣ್ಣಿಸಿದ್ದಾರೆ. ಬಾಬು ಅವರ ಕುಟುಂಬ, ಬಂಧುಗಳು, ಸ್ನೇಹಿತರು, ಟಿವಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕೊಲತ್ತೂರು ಕ್ಷೇತ್ರದ ಜನತೆಗೆ ಅವರು ಸಾಂತ್ವನ ಹೇಳಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಅನುಭವ ಹೊಂದಿದ್ದ ವಿ.ಎಸ್. ಬಾಬು ಅವರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಪಕ್ಷದಲ್ಲಿ ಹಂತಹಂತವಾಗಿ ಬೆಳೆದು ಉತ್ತರ ಚೆನ್ನೈ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2006ರ ವಿಧಾನಸಭಾ ಚುನಾವಣೆಯಲ್ಲಿ ಪುರಸವಾಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿ ಎಐಎಡಿಎಂಕೆ ಅಭ್ಯರ್ಥಿಯನ್ನು 90,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2011ರವರೆಗೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ನಂತರ ಡಿಎಂಕೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷ ತೊರೆದ ಬಾಬು, ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಜತೆ ಗುರುತಿಸಿಕೊಂಡಿದ್ದರು. 2026ರ ಫೆಬ್ರವರಿ 7ರಂದು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾದ ಅವರಿಗೆ 2026ರ ವಿಧಾನಸಭಾ ಚುನಾವಣೆಯಲ್ಲಿ ಕೊಲತ್ತೂರು ಕ್ಷೇತ್ರದಲ್ಲಿ ಎಂ.ಕೆ. ಸ್ಟಾಲಿನ್ ವಿರುದ್ಧ ಟಿಕೆಟ್ ನೀಡಲಾಗಿತ್ತು. ಚುನಾವಣೆಯಲ್ಲಿ 82,997 ಮತಗಳನ್ನು ಪಡೆದ ಬಾಬು, 74,202 ಮತ ಪಡೆದಿದ್ದ ಸ್ಟಾಲಿನ್ ಅವರನ್ನು 8,795 ಮತಗಳ ಅಂತರದಿಂದ ಸೋಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದರು. ಈ ಗೆಲುವಿನೊಂದಿಗೆ ಕೊಲತ್ತೂರಿನಲ್ಲಿ ಸ್ಟಾಲಿನ್ ಅವರ ಸತತ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತ್ತು.

ಸ್ಟಾಲಿನ್ ಸಂತಾಪ

ವಿ.ಎಸ್. ಬಾಬು ಅವರ ನಿಧನಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕೂಡ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ‘ಎಕ್ಸ್’ನಲ್ಲಿ ತಮಿಳಿನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಬು ಅವರ ಆರೋಗ್ಯ ಸುಧಾರಿಸುತ್ತಿದೆ ಎಂಬ ವರದಿಗಳಿದ್ದವು. ಹೀಗಿರುವಾಗ ಅವರ ಹಠಾತ್ ನಿಧನದ ಸುದ್ದಿ ಆಘಾತ ತಂದಿದೆ. ದುಃಖತಪ್ತ ಕುಟುಂಬಸ್ಥರಿಗೆ ಹಾಗೂ ಅವರ ಪಕ್ಷದ ಸದಸ್ಯರಿಗೆ ನನ್ನ ಆಳವಾದ ಸಂತಾಪ ಮತ್ತು ಸಾಂತ್ವನ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Join WhatsApp

Join Now

Join Telegram

Join Now