ಮುಂಬೈ.ಜುಲೈ.03: ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಜನಪ್ರಿಯ ಎನರ್ಜಿ ಡ್ರಿಂಕ್ ‘ಸ್ಟಿಂಗ್’ ಹಾಗೂ ಇತರ ಮಾದಕ ದ್ರವ್ಯಗಳನ್ನು ಶಾಲೆಗಳ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಪಾನೀಯದಲ್ಲಿರುವ ಕೆಲವು ಘಟಕಾಂಶಗಳು ಮಕ್ಕಳಿಗೆ ಸೂಕ್ತವಲ್ಲ ಎಂಬ ಕಳಕಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ವಿಕ್ರಮ್ ಪಾಚಪುತೆ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ (FDA) ಸಚಿವ ನರಹರಿ ಜಿರ್ವಾಲ್ ಅವರು ಈ ನಿರ್ಧಾರವನ್ನು ಪ್ರಕಟಿಸಿದರು.
ನಿಯಮ ಉಲ್ಲಂಘಿಸಿ ಶಾಲೆಗಳ 500 ಮೀಟರ್ ಒಳಗೆ ಸ್ಟಿಂಗ್ ಅಥವಾ ಯಾವುದೇ ಮಾದಕ ದ್ರವ್ಯಗಳನ್ನು ಮಾರಾಟ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಎನರ್ಜಿ ಡ್ರಿಂಕ್ಸ್ ಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.
ಆರೋಗ್ಯ ತಜ್ಞರ ಪ್ರಕಾರ, ಇಂತಹ ಎನರ್ಜಿ ಡ್ರಿಂಕ್ಸ್ಗಳಲ್ಲಿ ಕೆಫೀನ್ ಮತ್ತು ಸಕ್ಕರೆಯ ಪ್ರಮಾಣ ಅತಿಯಾಗಿರುತ್ತದೆ, ಇದು ಶಾಲಾ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಗೌರವಾನ್ವಿತ ಶಾಸಕರು ಶಾಲಾ ಆವರಣದ ಸುತ್ತಮುತ್ತ ‘ಸ್ಟಿಂಗ್’ ಎನರ್ಜಿ ಡ್ರಿಂಕ್ ಮಾರಾಟದ ಬಗ್ಗೆ ವ್ಯಕ್ತಪಡಿಸಿರುವ ಕಳಕಳಿ ನಿಜಕ್ಕೂ ಸಮಂಜಸವಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಬಂಧವನ್ನು ಜಾರಿಗೆ ತರಲಾಗುತ್ತಿದ್ದು, ಎಫ್ಡಿಎ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಜಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ನರಹರಿ ಜಿರ್ವಾಲ್ ತಿಳಿಸಿದರು.





















