ಸುದ್ದಿಒನ್,ಬೆಂಗಳೂರು,ಮೇ.30: ರಾಜ್ಯ ರಾಜಕಾರಣದಲ್ಲಿ ಭಾರಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನೂತನ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಕೆಶಿ ಅವರ ಹೆಸರನ್ನು ಪ್ರಸ್ತಾಪಿಸಿದರೆ, ಹಿರಿಯ ನಾಯಕ ಜಿ. ಪರಮೇಶ್ವರ್ ಅವರು ಇದನ್ನು ಅನುಮೋದಿಸಿದರು. ಸಭೆಯಲ್ಲಿದ್ದ ಎಲ್ಲಾ ಶಾಸಕರು ಒಮ್ಮತದಿಂದ ಈ ನಿರ್ಧಾರಕ್ಕೆ ಜೈ ಎಂದಿದ್ದಾರೆ.

ರಾಜಭವನದತ್ತ ಡಿಕೆಶಿ ಪ್ರಯಾಣ
ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾದ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಲುವಾಗಿ ಬೆಂಬಲಿಗರೊಂದಿಗೆ ಲೋಕಭವನದತ್ತ (ರಾಜಭವನ) ಧಾವಿಸಿದರು.
ರಾಜ್ಯಪಾಲರ ಭೇಟಿ, ಹಕ್ಕು ಮಂಡನೆ
ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್, ತಮ್ಮ ಪಕ್ಷಕ್ಕೆ ಇರುವ ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಪತ್ರವನ್ನು ಪರಿಶೀಲಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಹೊಸ ಸರ್ಕಾರ ರಚಿಸುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿದ್ದಾರೆ.











