ಬೆಂಗಳೂರು. ಸೆಪ್ಟೆಂಬರ್.01: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದರೂ ಬಿಜೆಪಿಯ ಆಕ್ರೋಶ ತಣ್ಣಗಾಗಿಲ್ಲ. ದುರುಪಯೋಗವಾಗಿರುವ ನಿಗಮದ ಸಂಪೂರ್ಣ ಹಣವನ್ನು ವಾಪಸ್ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಇಂದಿನಿಂದ ‘ಬಳ್ಳಾರಿ ಚಲೋ’ ಪಾದಯಾತ್ರೆಯನ್ನು ಆರಂಭಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಆರಂಭವಾಗುವ ಈ ಪಾದಯಾತ್ರೆಯು ಮುಂದಿನ 10 ದಿನಗಳ ಕಾಲ ಸುಮಾರು 170 ಕಿಲೋಮೀಟರ್ ಸಾಗಲಿದೆ. ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಲಿಂಗಸುಗೂರು, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ ಹಾಗೂ ಸಂಡೂರು ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಮೂಲಕ ಪಾದಯಾತ್ರೆ ಸಾಗಲಿದ್ದು, ಅಂತಿಮವಾಗಿ ಬಳ್ಳಾರಿಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ.

ಈ ಪಾದಯಾತ್ರೆಯ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸಿದ್ದು, ಮಾಜಿ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.










