ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 24 : ತಾಲ್ಲೂಕಿನ ಧರ್ಮಪುರ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಗುಂಡಿ ಮುಚ್ಚುವಂತೆ ಆಗ್ರಹಿಸಿ ಗುಂಡಿಯಲ್ಲಿ ಟೊಮೆಟೊ ಸಸಿ ನೆಟ್ಟು, ಹೋಮ ಸುಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಧರ್ಮಪುರದ ಡಾ. ಬಿಆರ್. ಅಂಬೇಡ್ಕರ್ ವೃತ್ತದಿಂದ ಶನೇಶ್ವರ ದೇವಸ್ಥಾನ ವರೆಗೆ ಜಾಥಾ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ವ್ಯಕ್ತಪಡಿಸಿದರು. ನಂತರ ನಾಡಕಚೇರಿಯ ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಹಿರಿಯ ಮುಖಂಡ ಎನ್ ಆರ್. ಲಕ್ಷ್ಮಿಕಾಂತ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಆಸೆಗಾಗಿ ಬಿಟ್ಟಿ ಭಾಗ್ಯ ಯೋಜನೆಗಳನ್ನು ನೀಡುವ ಮೂಲಕ, ಸರ್ಕಾರ ಗುಂಡಿಗಳನ್ನು ಮುಚ್ಚಲು ಪರದಾಡುವಷ್ಟು ಆರ್ಥಿಕ ದಿವಾಳಿಯಾಗಿದೆ. ಮಹಿಳೆಯರು ನಮಗೆ ಉಚಿತ ಭಾಗ್ಯಗಳು ಬೇಡ, ರಾಜ್ಯದ ಅಭಿವೃದ್ಧಿ ಪಡಿಸಿ ಎಂದರೂ ಸಹ ಮುಖ್ಯಮಂತ್ರಿಗಳು ಹಠಕ್ಕೆ ಬಿದ್ದರಂತೆ ಯೋಜನೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಡತನ, ಉದ್ಯೋಗ ತಾಂಡವಾಡುತ್ತಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ದರ ಕುಸಿತದಿಂದ ಈರುಳ್ಳಿ ಬೆಳೆಗಾರರು ಕೈಕಟ್ಟಿ ಕುಳಿತಿದ್ದು, ಹಾಕಿರುವ ಬಂಡವಾಳ ಸಿಗದೇ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಉದ್ಯೋಗಸ್ಥರಿಗೆ ಸಂಬಳ ನೀಡಲು ಸಹ ಯೋಚಿಸುವ ಸ್ಥಿತಿ ಸರ್ಕಾರಕ್ಕೆ ತಲೆದೂರಿದೆ ಎಂದು ಆರೋಪಿಸಿದರು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಕೆ. ಅಭಿನಂದನ್ ಮಾತನಾಡಿ ತಾಲೂಕಿನಲ್ಲಿ ಯಾವುದೇ ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕೆಂದರೆ ಯೋಚಿಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮುಖ್ಯರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು, ಅದೆಷ್ಟೋ ಪ್ರಯಾಣಿಕರು ಬಿದ್ದು ಅನಾಹುತ ಸಂಭವಿಸಿವೆ. ಗುಂಡಿ ಮುಚ್ಚಲು ಒಂದಿಡೀ ಮಣ್ಣು ಸಹ ಇವರಿಗೆ ಸಿಗದ ಪರಿಸ್ಥಿತಿ ಉದ್ಭವಿಸಿದೆ. ಗುಂಡಿಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ ಆದರೂ ಸಹ ಸರ್ಕಾರ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದ್ದು, ಆಡಳಿತ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲದಂತಾಗಿದೆ.
ತಾಲ್ಲೂಕಿನಲ್ಲಿ ಡಿಎಂಎಫ್ ಅನುದಾನವಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಸ್ತೆ ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿ ಇಲ್ಲದಂತಾಗಿದೆ. ತಾಲ್ಲೂಕಿನಗೆ ಡಿಎಂಎಫ್ ಯೋಜನೆಯಿಂದ 8 ಕೋಟಿ ಅನುದಾನ ಬಂದಿದ್ದು, ಈ ಹಣವನ್ನು ರಸ್ತೆಗೆ ಬಳಸಿದರೆ ಲಾಭ ಇರುವುದಿಲ್ಲವೆಂದು ಈ ಹಣವನ್ನು ಹೈ ಮಾಸ್ಟ್ ದೀಪ ಅಳವಡಿಕೆಗೆ ಬಳಸಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡ ಶಿವಣ್ಣ ಮಾತನಾಡಿ ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ತಾಲೂಕಿನ ಪ್ರತಿಯೊಂದು ರಸ್ತೆಗಳನ್ನ ದುರಸ್ತಿ ಮಾಡಬೇಕು. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ರಸ್ತೆ ಸಮಸ್ಯೆಯನ್ನ ಅರಿತು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಜೆಬಿ ರಾಜು, ಅರಳ್ಳಿಕೆರೆ ತಿಪ್ಪೇಸ್ವಾಮಿ, ಶಿವಮೂರ್ತಿ, ನಾಗರಾಜ್, ಈರಣ್ಣ, ಸೋಮಣ್ಣ, ಬಸವರಾಜ್, ಗಿರೀಶ್, ಯಲ್ಲಪ್ಪ, ಮಂಜಣ್ಣ, ದೇವರಾಜ್, ರಂಗಸ್ವಾಮಿ, ರವಿ, ನಿತಿನ್ ಗೌಡ, ಮೋಹನ್, ಮಲ್ಲಣ್ಣ, ಗೋವಿಂದಪ್ಪ, ಯೋಗೇಶ್, ರಘು, ತಿಮ್ಮರಾಜ್ ಯಾದವ್ , ಗುರುಮೂರ್ತಿ, ರವಿಶಂಕರ, ಗುರುಲಿಂಗಪ್ಪ, ದ್ಯಾಮಣ್ಣ, ರಾಕೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







