ಶಿವಮೊಗ್ಗ: ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಆ ಪಕ್ಷದ ನಾಯಕರುಗಳು, ಕಾರ್ಯಕರ್ತರು ಹುದ್ದೆಗಳಿಗಾಗಿ ಹಂಬಲಿಸ್ತಾ ಇರ್ತಾರೆ. ಅದು ಸಣ್ಣ ಹುದ್ದೆಯಾಗಲಿ, ದೊಡ್ಡ ಹುದ್ದೆಯಾಗಲಿ. ಹೀಗಿರುವಾಗ ಬೇರೆ ಪಕ್ಷದವರಿಗೆ ಹುದ್ದೆಗಳನ್ನ ನೀಡಿದ್ರೆ ಹೇಗಿರುತ್ತೆ ಹೇಳಿ. ಅಂಥದ್ದೊಂದು ಘಟನೆ ಕಾಂಗ್ರೆಸ್ ಪಕ್ಷದಲ್ಲಿ ನಡೆದಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ರೊಚ್ವಿಗೆದ್ದಿದ್ದಾರೆ. ಈ ಬೆನ್ನಲ್ಲೇ ಸ್ಥಾನಮಾನವನ್ನು ರದ್ದು ಮಾಡಲಾಗಿದೆ.
ಬಿಜೆಪಿ ಮುಖಂಡನಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನಮಾನವನ್ನು ನೀಡಲಾಗಿದೆ. ಶಿಕಾರಿಪುರದ ಬಿಜೆಪಿ ಮುಖಂಡ ಬಿ.ಡಿ.ಭೂಕಾಂತ್ ಗೆ ರಾಜ್ಯ ಸಚಿವ ಸ್ಥಾನವನ್ನು ನೀಡಲಾಗಿದೆ. ಫೆಬ್ರವರಿ 7ನೇ ತಾರೀಖು 54 ನಿಗಮ ಮಂಡಳಿ ಅಧ್ಯಕ್ಷರ ನೇಮಕವನ್ನು ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಬಿಜೆಪಿ ಮುಖಂಡ ಬಿ.ಡಿ.ಭೂಕಾಂತ್ ಗೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.
ಜೊತೆಗೆ ರಾಜ್ಯ ಸಚಿವ ಸ್ಥಾನಮಾನವನ್ನು ಸಹ ನೀಡಲಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಆಂತರಿಕ ಅಸಮಾಧಾನ ಸೃಷ್ಟಿಯಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿದ್ದು ಏಕೆ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದರು. ರಾಜ್ಯ ಸರ್ಕಾರದ ಆದೇಶವೇ ಈಗ ಸ್ವಪಕ್ಷ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಶಾಸಕರಿಗೆ ಪ್ರಮುಖ ನಿಗಮ ಮಂಡಳಿ ಸ್ಥಾನಮಾನ ಅನ್ವಯವಾಗುವಂತೆ ಸರ್ಕಾರ ಆದೇಶ ಮಾಡಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗದಿಂದ ಆದೇಶ ಹೊರಡಿಸಲಾಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು. ಇದೀಗ ಆ ಆದೇಶವನ್ನು ರದ್ದು ಮಾಡಲಾಗಿದೆ.










