ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ವಕ್ಫ್ ಬೋರ್ಡ್‍ನಲ್ಲಾಗುತ್ತಿರುವ ಅಕ್ರಮ ಹಾಗೂ ಅನ್ಯಾಯಗಳನ್ನು ಸರಿಪಡಿಸಬೇಕಾದರೆ ಮೊದಲು ಎಲ್ಲರೂ ಒಂದಾಗಬೇಕೆಂದು ಸದಾ-ಎ-ಇತ್ತೆಹಾದ್ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷರಾದ ಅಲಿ ಜನಾಬ್ ಮುಜಾಹಿದ್ ಅಲಿ ಬಾಬ ಕರೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಶಾಖೆ ಸ್ಥಾಪಿಸುವ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ವ್ಯಾಪಿಗೆ ಒಳಪಡುವ ಸಂಸ್ಥೆಗಳಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಬೇಕಾಗಿದೆ. ಹದಿನಾರು ವರ್ಷಗಳ ಹಳೆ ಸಂಘಟನೆ ನಮ್ಮದು. ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶ. ನಮ್ಮೂರಲ್ಲಿ ಆಗುತ್ತಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರಬಾರದು. ಒಳ ಪಂಗಡಗಳನ್ನು ಮರೆತು ಎಲ್ಲರೂ ಒಂದಾಗುವತನಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಶಿಯಾ, ಸುನ್ನಿ ಅಂತ ಒಡಕು ಮೂಡಿಸಿ ರಾಜಕೀಯವಾಗಿ ನಮ್ಮನ್ನ ಆಟ ಆಡಿಸುತ್ತಿದ್ದಾರೆ. ಇದರ ವಿರುದ್ದ ಮುಸಲ್ಮಾನರು ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.
ಟು ಬಿ. ಮೀಸಲಾತಿಯನ್ನು ತೆಗೆದು ಹಾಕಿದ್ದಲ್ಲದೆ ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದು, ಬಿಜೆಪಿ. ಸಚಿವ ಜಮೀರ್ ಅಹಮದ್ ಸಿದ್ದರಾಮಯ್ಯನವರ ಜೊತೆಯಲ್ಲಿ ಸೇರಿಕೊಂಡು ಯಾರದ್ದು ನಡೆಯದಂತೆ ಮಾಡಿದ. ಮುಸಲ್ಮಾನರನ್ನು ವಿಭಜಿಸಿ ಕತಮ್ ಮಾಡಲು ಹೊರಟಿದ್ದಾರೆ. ಯು.ಟಿ.ಖಾದರ್ ಜೊತೆ ಸೇರಿಕೊಂಡಿರುವ ಜಿಲಾನಿ ಮುರಾಶಿಯನ್ನು ಮೊದಲು ತೆಗೆದು ಹಾಕಬೇಕು. ವಕ್ಫ್ ಮಂಡಳಿಗೆ ಕಮಿಟಿ ಮಾಡಿದಾಗ ಮಾತ್ರ ನಿಮಗೆಲ್ಲಾ ತಾಕತ್ತು ಬರುತ್ತದೆ. ಅಲ್ಲಿಯವರೆಗೂ ಮುಸಲ್ಮಾನರು ಅನ್ಯಾಯ ಅಕ್ರಮವನ್ನು ಖಂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸೈಯದ್ ಇಸ್ಮಾಯಿಲ್ ಮಾತನಾಡಿ ಟು ಬಿ.ಮೀಸಲಾತಿಯನ್ನು ತೆಗೆದು ಹಾಕಿ ಬಿಜೆಪಿ. ಸರ್ಕಾರ ಮುಸ್ಲಿಂರಿಗೆ ಘನ ಘೋರ ಅನ್ಯಾಯವೆಸಗಿದೆ. ಮತ್ತೆ ಟು ಬಿ.ಗಾಗಿ ಹೋರಾಟ ನಡೆಸಬೇಕಿದೆ. ಇಲ್ಲವಾದಲ್ಲಿ ಮುಸಲ್ಮಾನರು ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಗಮನ ಹರಿಸಿ ಎಂದು ಮುಜಾಹಿದ್ ಅಲಿಬಾಬರವರಲ್ಲಿ ಮನವಿ ಮಾಡಿದರು.
ಸೈಯದ್ ಅಫಾಖ್ ಅಹಮದ್ ಮಾತನಾಡುತ್ತ ಒಂದು ವರ್ಷದಿಂದ ಜಿಲ್ಲಾ ವಕ್ಫ್ ಬೋರ್ಡ್ ಛೇರ್ಮನ್ ಹುದ್ದೆ ಖಾಲಿಯಿದೆ. ವಕ್ಫ್ ಮಂಡಳಿಯಿಂದ ಬರುವ ಆದಾಯದಲ್ಲಿ ಶೇ.30 ರಷ್ಟು ಹಣವನ್ನು ಬಡವರು, ವಿಧವೆಯರು ಹಾಗೂ ಬಡ ಮಕ್ಕಳ ನೆರವಿಗೆ ಉಪಯೋಗಿಸಬೇಕು. ವಕ್ಫ್ ಬೋರ್ಡ್‍ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಎಲ್ಲವೂ ಬಗೆಹರಿಯಬೇಕಾಗಿರುವುದರಿಂದ ಸಚಿವ ಯು.ಟಿ.ಖಾದರ್ ಜೊತೆ ಚರ್ಚಿಸುವಂತೆ ಮುಜಾಹಿದ್ ಅಲಿಬಾಬರವರಲ್ಲಿ ವಿನಂತಿಸಿದರು.

ಟಿ.ಶಫಿವುಲ್ಲಾ ಮಾತನಾಡುತ್ತ ಭಾರತದ ಎಲ್ಲಾ ಕಡೆ ಮುಸ್ಲಿಂರಿದ್ದಾರೆ. ರಾಜಕೀಯವಾಗಿ ಚಿಂತನೆ ಮಾಡಿದಾಗ ಅಸ್ತಿತ್ವ ಉಳಿಯುತ್ತದೆ. ಮುಸ್ಲಿಂರ ಸ್ಥಿತಿಗತಿ ಬಗ್ಗೆ ಚರ್ಚೆಯಾಗುತ್ತಿಲ್ಲ. ವಕ್ಫ್ ಬೋರ್ಡ್‍ನಲ್ಲಿ ಸಾಲು ಸಾಲು ಸಮಸ್ಯೆಗಳಿದೆ. ಅವುಗಳನ್ನು ಮೊದಲು ಬಗೆಹರಿಸಿ ಎಂದು ಸಭೆಯ ಗಮನಕ್ಕೆ ತಂದರು.
ಹೆಚ್.ಪ್ಯಾರೆಜಾನ್ ಮಾತನಾಡಿ ಜಿಲ್ಲೆಯಲ್ಲಿ ಎರಡು ಲಕ್ಷ ಅಲ್ಪಸಂಖ್ಯಾತ ಮತಗಳಿವೆ. ಚಿತ್ರದುರ್ಗದಲ್ಲಿ 75 ಸಾವಿರ ಮುಸ್ಲಿಂ ಮತಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೇರಿದ 130 ಇಲಾಖೆಗಳಲ್ಲಿ ಯಾವ್ಯಾವ ಸೌಲಭ್ಯಗಳಿದೆ ಎನ್ನುವುದನ್ನು ಅಲ್ಪಸಂಖ್ಯಾತರಿಗೆ ತಿಳಿಸಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಕೊಡಿಸಬೇಕೆಂದು ವಿನಂತಿಸಿದರು.
ಸಂಘಟನೆಯ ಅಧ್ಯಕ್ಷ ಅಲಿವುಲ್ ಹುಸೇನಿಸಾಬ್, ಎಸ್.ಆರ್.ಇ.ಹತಾವುಲ್ಲಾ, ಜಬಿ, ಮನ್ಸೂರ್, ಎ.ಜಾಕೀರ್‍ಹುಸೇನ್, ಸೈಯದ್ ಮೊಹಿದ್ದೀನ್, ಇನ್ನು ಅನೇಕ ಮುಸ್ಲಿಂ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.











