Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೀದರ್ : ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೂರ ಅನುಮಾನಾಸ್ಪದ ಸಾವು!

---Advertisement---

ಬೀದರ್.ಜೂನ್.16: ಮಜಾಭಾರತ ಕಾಮಿಡಿ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದಿದ್ದ ಖ್ಯಾತ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೂರ (36) ಅವರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.

ಮೂಲತಃ ಹುಮ್ನಾಬಾದ್ನ ಟೀಚರ್ಸ್ ಕಾಲೋನಿಯ ನಿವಾಸಿಯಾದ ಸಿದ್ದಾರ್ಥ ಅವರು, ಜೂನ್ 13ರಂದು ಸ್ನೇಹಿತರೊಂದಿಗೆ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಮೂರು ದಿನ ಕಳೆದರೂ ಅವರು ಮನೆಗೆ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಸೋಮವಾರ ಬೆಳಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು, ಸಿದ್ದಾರ್ಥ ಅವರ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಮಾಹಿತಿ ಕಲೆಹಾಕಿದ್ದಾರೆ. ಕೊನೆಗೆ ಸೋಮವಾರ ಮಧ್ಯಾಹ್ನದ ವೇಳೆಗೆ ಹುಮ್ನಾಬಾದ್ ಹೊರವಲಯದ ನಿರ್ಜನ ಹಾಗೂ ಖಾಲಿ ಜಾಗದ ಅರಣ್ಯ ಪ್ರದೇಶದಲ್ಲಿ ಸಿದ್ದಾರ್ಥ ಅವರ ಮೃತದೇಹ ಪತ್ತೆಯಾಗಿದೆ.

ಸದ್ಯಕ್ಕೆ ಸಿದ್ದಾರ್ಥ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಶವ ಪತ್ತೆಯಾದ ಸ್ಥಳ ಮತ್ತು ಸನ್ನಿವೇಶಗಳನ್ನು ನೋಡಿದರೆ ಇದು ಸಹಜ ಸಾವಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬ್ರಿಮ್ಸ್ (BRIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ತಮ್ಮ ಅದ್ಭುತ ಅಭಿನಯ ಮತ್ತು ಹಾಸ್ಯಪ್ರಜ್ಞೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಪ್ರತಿಭಾವಂತ ಕಲಾವಿದನ ಅಕಾಲಿಕ ಹಾಗೂ ಅನುಮಾನಾಸ್ಪದ ಸಾವು ಅಭಿಮಾನಿಗಳಲ್ಲಿ ಮತ್ತು ಕುಟುಂಬಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Join WhatsApp

Join Now

Join Telegram

Join Now