ಭೋವಿ ನಿಗಮ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜೊತೆಗೆ ಭೋವಿ ಸಮುದಾಯದವರು ಮುಂದಿಟ್ಟಿರುವ ಬೇಡಿಕೆಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದವರಿಗೆ ಕುಲಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಕುರಿತೂ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಯಾರೂ ವಂಚಿತರಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಬಸವಾದಿ ಶರಣರು ಹಾಗೂ ಸಿದ್ದರಾಮೇಶ್ವರರು ಬೋಧಿಸಿದ ಸಮಾನತೆಯ ತತ್ವದ ಮಾರ್ಗದಲ್ಲೇ ಸರ್ಕಾರ ಸಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.“ಎಲ್ಲಾ ಜಾತಿಗಳನ್ನು ಪ್ರೀತಿಸಬೇಕು, ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಿ, ಸಂಪತ್ತನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ದರಾಮೇಶ್ವರರು ಬೋಧಿಸಿದ್ದರು. ಅದೇ ದಾರಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ” ಎಂದು ಹೇಳಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ತಂದಿರುವುದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಎಡಗೈ ಸಮುದಾಯಕ್ಕೆ 5.25%, ಬಲಗೈ ಸಮುದಾಯಕ್ಕೆ 5.25% ಹಾಗೂ ಇತರ ಉಪಜಾತಿಗಳಿಗೆ 4.5% ಮೀಸಲಾತಿ ನೀಡಲಾಗಿದೆ ಎಂದರು.ಸಾಮಾಜಿಕ ನ್ಯಾಯದ ತತ್ವದಲ್ಲಿ ಸರ್ಕಾರ ನಂಬಿಕೆ ಇಟ್ಟಿದ್ದು, ರಾಜ್ಯದಲ್ಲಿ ಸಮಸಮಾಜ ನಿರ್ಮಾಣವೇ ನಮ್ಮ ಗುರಿಯಾಗಿದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ದೊರೆಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.


















