ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಸಾವನ್ನಪ್ಪಿದ. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಮೃತ ರಾಜಶೇಖರ್ ಕುಟುಂಬಕ್ಕೆ ಪರಿಹಾರವನ್ನ ನೀಡಿದ್ದಾರೆ. 25 ಲಕ್ಷ ರೂಪಾಯಿ ಹಣ ನೀಡಿ, ಸಾಂತ್ವಾನ ಹೇಳಿ ಬಂದಿದ್ದಾರೆ.
ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಜಮೀರ್ ಅಹ್ಮದ್ ಖಾನ್, ರಾಜಶೇಖರ್ ರೆಡ್ಡಿ ತಾಯಿ ಹಾಗೂ ಸಹೋದರಿ ತಮ್ಮ ಕಷ್ಟಗಳನ್ನ ಹೇಳಿಕೊಂಡರು. ಅವರ ತಂದೆಯೂ ಹೋಗ್ಬಿಟ್ಟಿದ್ದಾರೆ ಸರ್ ಅಂತ ಮಗ ಹಾಗೂ ಗಂಡನ ಸಾವಿನ ಬಗ್ಗೆ ಆ ತಾಯಿ ನೋವಲ್ಲಿ ಹೇಳಿಕೊಂಡರು. ಇತ್ತ ಸಹೋದರಿ ಇರುವ ಜವಾಬ್ದಾರಿಯ ಬಗ್ಗೆ ಹೇಳಿಕೊಂಡರು. ಬಳಿಕ ಮಾಧ್ಯಮದವರನ್ನೆಲ್ಲಾ ಹೊರಗೆ ಕಳುಹಿಸಿದ ಜಮೀರ್, ಮೃತ ರಾಜಶೇಖರ್ ಕುಟುಂಬಕ್ಕೆ ಪರಿಹಾರ ನೀಡಿದ್ರು.
ಒಂದಷ್ಟು ತಿನಿಸುಗಳನ್ನು ನೀಡಿದರು ಎನಿಸುತ್ತೆ. ಬಳಿಕ ನಿಮ್ಮ ಜೊತೆಗೆ ನಮ್ಮ ಸರ್ಕಾರ ಸದಾ ಜೊತೆಗೆ ಇರಲಿದೆ. ನಮ್ಮ ಶಾಸಕರು ಇಲ್ಲಿನೇ ಇದ್ದಾರೆ ಎಂದು ಧೈರ್ಯ ತುಂಬಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರ ಜೊತೆಗೆ ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಅವರು ಸಾಥ್ ನೀಡಿದ್ದರು. ಮನೆಯವರಿಗೆ ಮಗನ ಸಾವಿನ ನೋವನ್ನು ಮರೆಯುವ ಶಕ್ತಿ ನೀಡಲೆಂದು ಪ್ರಾರ್ಥಿಸಿ, ಕುಟುಂಬಸ್ಥರ ಜೊತೆಗೆ ಇನ್ನಷ್ಟು ಸಮಯ ಕಳೆದು ಸಮಾಧಾನ ಮಾಡಿ ಬಂದರು. ಬ್ಯಾನರ್ ಕಟ್ಟುವ ಗಲಾಟೆಯ ಸಂದರ್ಭದಲ್ಲಿ ಗಾಳಿಯಲ್ಲಿ ಹಾರಿದ ಗುಂಡು ರಾಜಶೇಖರ್ ದೇಹಕ್ಕೂ ಹೊಕ್ಕಿತ್ತು. ಇಡೀ ಸಂಸಾರದ ಹೊಣೆ ಹೊತ್ತಿದ್ದ ರಾಜಶೇಖರ್ ಸಾವನ್ನಪ್ಪಿದ್ದಾರೆ. ಸಹೋದರಿ, ತಾಯಿ ದಿಕ್ಕೆ ಕಾಣದಂತೆ ಕಣ್ಣೀರಿಡುತ್ತಿದ್ದಾರೆ.

