ದೆಹಲಿ.ಜುಲೈ.12: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಕೇವಲ ಒಂದು ಸೌಲಭ್ಯವಾಗಿ ಉಳಿದಿಲ್ಲ, ಅದು ಪ್ರತಿಯೊಬ್ಬರ ಅಗತ್ಯವಾಗಿ ಬದಲಾಗಿದೆ. ಶಾಪಿಂಗ್, ಹೋಟೆಲ್ ಬಿಲ್ ಅಥವಾ ಯಾವುದೇ ದೊಡ್ಡ ಆನ್ ಲೈನ್ ವಹಿವಾಟು ಇರಲಿ, ಜನರು ಯೋಚಿಸದೆ ಕಾರ್ಡ್ ಸ್ವೈಪ್ ಮಾಡುತ್ತಾರೆ. ಆದರೆ, ಈ ಅಭ್ಯಾಸ ನಿಮ್ಮ ಜೇಬಿಗೆ ದೊಡ್ಡ ಹೊರೆಯಾಗಬಹುದು ಎಂಬುದು ನಿಮಗೆ ಗೊತ್ತೇ?
ಕ್ರೆಡಿಟ್ ಕಾರ್ಡ್ ಕಂಪನಿಗಳು ಮತ್ತು ಬ್ಯಾಂಕುಗಳು ನಿಮಗೆ ನೀಡುವ ಸೌಲಭ್ಯಗಳ ಮರೆಯಲ್ಲಿ ಹತ್ತಾರು ರೀತಿಯ ಗುಪ್ತ ಶುಲ್ಕಗಳನ್ನು (Hidden Charges) ವಸೂಲಿ ಮಾಡುತ್ತವೆ. ಬಹುತೇಕ ಗ್ರಾಹಕರು ಈ ಬಗ್ಗೆ ಗಮನ ಹರಿಸುವುದೇ ಇಲ್ಲ.ನೀವು ಕ್ರೆಡಿಟ್ ಕಾರ್ಡ್ ಬಳಸುವಾಗ ಜಾಗರೂಕರಾಗಿರಬೇಕಾದ ಆ 8 ಪ್ರಮುಖ ಶುಲ್ಕಗಳ ವಿವರ ಇಲ್ಲಿದೆ:
ಜಾಯಿನಿಂಗ್ ಮತ್ತು ವಾರ್ಷಿಕ ಶುಲ್ಕ (Joining & Annual Fees)

ನಾವು ಹೊಸ ಕ್ರೆಡಿಟ್ ಕಾರ್ಡ್ ಪಡೆಯುವಾಗ ಮೊದಲು ಎದುರಾಗುವುದೇ ಜಾಯಿನಿಂಗ್ ಮತ್ತು ವಾರ್ಷಿಕ ಶುಲ್ಕ. ಬ್ಯಾಂಕುಗಳು ಹೆಚ್ಚಾಗಿ ‘ಲೈಫ್ ಟೈಮ್ ಫ್ರೀ’ (Lifetime Free) ಎಂಬ ಆಮಿಷ ಒಡ್ಡಿ ಕಾರ್ಡ್ ನೀಡುತ್ತವೆ. ಆದರೆ ಪ್ರೀಮಿಯಂ ಕಾರ್ಡ್ ಗಳ ಮೇಲೆ ಭಾರಿ ಜಾಯಿನಿಂಗ್ ಫೀಸ್ ಇರುತ್ತದೆ. ಇದರೊಂದಿಗೆ ಪ್ರತಿ ವರ್ಷ ಕಾರ್ಡ್ ಸಕ್ರಿಯವಾಗಿಡಲು ವಾರ್ಷಿಕ ನಿರ್ವಹಣಾ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
ಬಡ್ಡಿಯ ಚಕ್ರವ್ಯೂಹ
ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿ ದರ ಅತ್ಯಂತ ಹೆಚ್ಚಿರುತ್ತದೆ. ತಿಂಗಳ ಕೊನೆಯಲ್ಲಿ ನೀವು ಪೂರ್ಣ ಬಿಲ್ ಪಾವತಿಸದೆ, ಕೇವಲ ‘ಕನಿಷ್ಠ ಪಾವತಿ ಮೊತ್ತ’ವನ್ನು (Minimum Amount Due) ಮಾತ್ರ ಪಾವತಿಸಿ ಸುಮ್ಮನಾದರೆ, ಬ್ಯಾಂಕುಗಳು ಉಳಿದ ಮೊತ್ತದ ಮೇಲೆ ಭಾರಿ ಬಡ್ಡಿ ವಿಧಿಸುತ್ತವೆ. ಈ ಬಡ್ಡಿ ದರ ವಾರ್ಷಿಕವಾಗಿ ಶೇ. 36 ರಿಂದ ಶೇ. 45 ರಷ್ಟಿರುತ್ತದೆ.
ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ (Cash Advance Fee)
ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ಡ್ರಾ ಮಾಡಬಹುದು. ಆದರೆ ಹೀಗೆ ಮಾಡಿದರೆ ಬ್ಯಾಂಕುಗಳು ‘ಕ್ಯಾಶ್ ಅಡ್ವಾನ್ಸ್ ಫೀಸ್’ ಹೆಸರಿನಲ್ಲಿ ದೊಡ್ಡ ಮೊತ್ತವನ್ನು ಕಡಿತಗೊಳಿಸುತ್ತವೆ. ಅಷ್ಟೇ ಅಲ್ಲದೆ, ಹಣ ವಿತ್ ಡ್ರಾ ಮಾಡಿದ ದಿನದಿಂದಲೇ ಆ ಮೊತ್ತದ ಮೇಲೆ ಭಾರಿ ಬಡ್ಡಿ ಲೆಕ್ಕಾಚಾರ ಆರಂಭವಾಗುತ್ತದೆ ಹಾಗೂ ಒಂದು ನಿಗದಿತ ವಹಿವಾಟು ಶುಲ್ಕವೂ ಅನ್ವಯವಾಗುತ್ತದೆ.
ಇಂಧನ ಮೇಲ್ತೆರಿಗೆ
ಅನೇಕರು ತಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಲು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್ ಮೂಲಕ ಇಂಧನ ಖರೀದಿಸಿದಾಗ ಒಟ್ಟು ಬಿಲ್ ನ ಸುಮಾರು ಶೇ. 1 ಅಥವಾ ಅದಕ್ಕಿಂತ ಹೆಚ್ಚು ‘ಫ್ಯುಯೆಲ್ ಸರ್ ಚಾರ್ಜ್’ ಪಾವತಿಸಬೇಕಾಗಬಹುದು. ಹಲವು ಕಂಪನಿಗಳು ಈ ಶುಲ್ಕವನ್ನು ಮನ್ನಾ ಮಾಡುವುದಾಗಿ ಹೇಳುತ್ತವೆಯಾದರೂ, ಅದಕ್ಕೂ ಹತ್ತಾರು ನಿಬಂಧನೆಗಳು ಮತ್ತು ಮಿತಿಗಳಿರುತ್ತವೆ.
ವಿದೇಶಿ ವಿನಿಮಯ ಶುಲ್ಕ
ವಿದೇಶ ಪ್ರವಾಸ ಮಾಡುವಾಗ ಅಥವಾ ಅಂತರರಾಷ್ಟ್ರೀಯ ವೆಬ್ ಸೈಟ್ ಗಳಿಂದ ಶಾಪಿಂಗ್ ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸಿ ಬೇರೆ ದೇಶದ ಕರೆನ್ಸಿಯಲ್ಲಿ ಪಾವತಿ ಮಾಡಿದರೆ, ಬ್ಯಾಂಕುಗಳು ‘ಫಾರೆಕ್ಸ್ ಮಾರ್ಕಪ್ ಫೀಸ್’ ವಸೂಲಿ ಮಾಡುತ್ತವೆ. ಇದು ಒಂದು ರೀತಿಯ ಕರೆನ್ಸಿ ಪರಿವರ್ತನೆ ಶುಲ್ಕವಾಗಿದ್ದು, ನೀವು ಖರ್ಚು ಮಾಡಿದ ಒಟ್ಟು ಮೊತ್ತದ ಶೇ. 2 ರಿಂದ ಶೇ. 4.5 ರಷ್ಟಿರುತ್ತದೆ.
ಮಿತಿ ಮೀರಿದ ಶುಲ್ಕ
ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕುಗಳು ಕೆಲವೊಮ್ಮೆ ಅವರ ನಿಗದಿತ ಕ್ರೆಡಿಟ್ ಮಿತಿಗಿಂತ (Credit Limit) ಸ್ವಲ್ಪ ಹೆಚ್ಚು ಖರ್ಚು ಮಾಡಲು ಅನುಮತಿಸುತ್ತವೆ. ಆದರೆ ಈ ಸೌಲಭ್ಯ ಉಚಿತವಲ್ಲ. ನೀವು ನಿಗದಿತ ಮಿತಿಯನ್ನು ದಾಟಿದ ತಕ್ಷಣ, ಬ್ಯಾಂಕುಗಳು ‘ಓವರ್‌ಲಿಮಿಟ್ ಫೀಸ್’ ವಿಧಿಸುತ್ತವೆ. ಇದು ಕನಿಷ್ಠ 500 ರೂ. ಅಥವಾ ಮಿತಿ ಮೀರಿದ ಮೊತ್ತದ ನಿರ್ದಿಷ್ಟ ಶೇಕಡಾವಾರು ಇರಬಹುದು.
ತಡವಾದ ಪಾವತಿ ಶುಲ್ಕ
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ದಿನಾಂಕದೊಳಗೆ ಪಾವತಿಸಲು ವಿಫಲವಾದರೆ, ಬ್ಯಾಂಕುಗಳು ತಡವಾದ ಪಾವತಿ ಶುಲ್ಕವನ್ನು ವಿಧಿಸುತ್ತವೆ. ನಿಮ್ಮ ಬಾಕಿ ಮೊತ್ತದ ಆಧಾರದ ಮೇಲೆ ಈ ಶುಲ್ಕವನ್ನು ಲೆಕ್ಕಹಾಕಲಾಗುತ್ತದೆ ಮತ್ತು ಇದು ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ.
ಜಿಎಸ್ ಟಿ ಶುಲ್ಕಗಳು (GST on Charges)
ಕ್ರೆಡಿಟ್ ಕಾರ್ಡ್‌ನ ಮೇಲಿನ ಎಲ್ಲಾ ಶುಲ್ಕಗಳು, ಬಡ್ಡಿ ಮತ್ತು ದಂಡಗಳ ಮೇಲೆ ಸರ್ಕಾರ ನಿಯಮಾವಳಿಗಳ ಪ್ರಕಾರ ಶೇ. 18 ರಷ್ಟು ಜಿಎಸ್ ಟಿ (GST) ಅನ್ವಯವಾಗುತ್ತದೆ. ಇದು ನಿಮ್ಮ ಒಟ್ಟು ಬಿಲ್ ಮೊತ್ತವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಕ್ರೆಡಿಟ್ ಕಾರ್ಡ್ ಎಂಬುದು ಇಕ್ಕಿಲದ ಕತ್ತಿಯಿದ್ದಂತೆ. ಇದನ್ನು ಸರಿಯಾಗಿ ಬಳಸಿದರೆ ಲಾಭ, ತಪ್ಪಾಗಿ ಬಳಸಿದರೆ ಭಾರಿ ನಷ್ಟ. ಈ ಎಲ್ಲಾ ಗುಪ್ತ ಶುಲ್ಕಗಳಿಂದ ಬಚಾವಾಗಲು ಇರುವ ಏಕೈಕ ಮಾರ್ಗವೆಂದರೆ, ಕಾರ್ಡ್ ಪಡೆಯುವಾಗ ಅದರ ನಿಯಮ ಮತ್ತು ಷರತ್ತುಗಳ (Terms and Conditions) ಪತ್ರವನ್ನು ಜಾಗರೂಕತೆಯಿಂದ ಓದಿ ಅರ್ಥಮಾಡಿಕೊಳ್ಳುವುದು.









