ಮೈಸೂರು.ಜುಲೈ.12 : ಭಾರತೀಯ ಚಿತ್ರರಂಗದ ಹಿರಿಯ ಗಾಯಕಿ, ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ (88) ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅವರ ಇಚ್ಛೆಯಂತೆಯೇ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ತೋಟದಲ್ಲಿ ತೆಲುಗು ಬ್ರಹ್ಮಾಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಸಂಪ್ರದಾಯದಂತೆ ಅಂತ್ಯಕ್ರಿಯೆ, ಸರ್ಕಾರಿ ಗೌರವ ಸಲ್ಲಿಕೆ
ಎಸ್. ಜಾನಕಿ ಅವರ ಇಚ್ಛೆಯಂತೆಯೇ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳು ನಡೆದವು. ರಾಜ್ಯ ಸರ್ಕಾರದ ವತಿಯಿಂದ ಪೊಲೀಸ್ ಗೌರವಗಳೊಂದಿಗೆ ಗಾಯಕಿ ಜಾನಕಿ ಅವರ ಪಾರ್ಥಿವ ಶರೀರಕ್ಕೆ ಮೊಮ್ಮಗಳು ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ವಿದಾಯ ಕೋರಿದರು.
ಆರು ದಶಕಗಳ ಅಭೂತಪೂರ್ವ ಗಾಯನ ಯಾನ
ತಮ್ಮ 19ನೇ ವಯಸ್ಸಿನಲ್ಲಿಯೇ (1957 ರಲ್ಲಿ) ತಮಿಳು ಚಿತ್ರದ ಮೂಲಕ ಹಿನ್ನೆಲೆ ಗಾಯನ ವೃತ್ತಿ ಆರಂಭಿಸಿದ ಎಸ್. ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದರು. ಸಿನಿರಂಗದ ಆರಂಭದ ದಿನಗಳಲ್ಲಿ ಅವರು ಅಭಿನಯ ಕೂಡ ಮಾಡಿದ್ದರು.
ಭಾಷೆಗಳ ಗಡಿ ದಾಟಿದ ಧ್ವನಿ: ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ಪ್ರಮುಖ ಭಾಷೆಗಳಲ್ಲಿ ಇವರು ಹಾಡಿದ್ದಾರೆ.
ಜಾಗತಿಕ ಮನ್ನಣೆ: ಭಾರತೀಯ ಭಾಷೆಗಳು ಮಾತ್ರವಲ್ಲದೆ ಜಪಾನೀಸ್, ಜರ್ಮನ್ ಮುಂತಾದ ವಿದೇಶಿ ಭಾಷೆಗಳೂ ಸೇರಿ ಒಟ್ಟು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಜಾನಕಮ್ಮ ಜಾಗತಿಕ ದಾಖಲೆ ಬರೆದಿದ್ದಾರೆ.
ಸರಳತೆಯ ಸಾಕಾರ ಮೂರ್ತಿ: ಸದಾ ಬಿಳಿ ಬಣ್ಣದ ಪೋಷಾಕು ಹಾಗೂ ಬಿಳಿ ಸೀರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಜಾನಕಮ್ಮ, ತಮ್ಮ ಸರಳತೆ ಮತ್ತು ಮಧುರ ಸ್ವಭಾವದಿಂದಲೇ ಎಲ್ಲರ ಮನ ಗೆದ್ದಿದ್ದರು.
ಪ್ರಶಸ್ತಿ, ಪುರಸ್ಕಾರಗಳ ಮಹಾಪೂರ

ಶಾಸ್ತ್ರೀಯ ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿ ಪಡೆಯದಿದ್ದರೂ ತಮ್ಮ ಅಪ್ರತಿಮ ಪ್ರತಿಭೆಯಿಂದಲೇ ಸಂಗೀತ ಲೋಕವನ್ನು ಆಳಿದ ಜಾನಕಿಯವರ ಸಾಧನೆ ಅಪಾರ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು: 4
ವಿವಿಧ ರಾಜ್ಯ ಪ್ರಶಸ್ತಿಗಳು: ಒಟ್ಟು 29 (ಕೇರಳ-11, ಆಂಧ್ರಪ್ರದೇಶ-10, ತಮಿಳುನಾಡು-6, ಕರ್ನಾಟಕ ಮತ್ತು ಒರಿಸ್ಸಾ ತಲಾ 1)
ಗೌರವ ಡಾಕ್ಟರೇಟ್: ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 2014 ರಲ್ಲಿ ಕರ್ನಾಟಕ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.








