ಮುಂಬೈ.ಆಗಸ್ಟ್.7: ಸಾಲ ಮರುಪಾವತಿಸದ ಗ್ರಾಹಕರ ಮೊಬೈಲ್, ಟ್ಯಾಬ್ಲೆಟ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಸಾಲ ವಸೂಲಾತಿಗಾಗಿ ಬ್ಯಾಂಕ್‌ಗಳು ರಿಮೋಟ್ ಮೂಲಕ ಲಾಕ್ ಮಾಡುವುದಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. 2027ರ ಜನವರಿ 1ರಿಂದ ಈ ನೂತನ ನಿಯಮಗಳು ಜಾರಿಗೆ ಬರಲಿವೆ.
ಹೊಸ ಮಾರ್ಗಸೂಚಿಯ ಪ್ರಕಾರ, ವೈಯಕ್ತಿಕ ಸಾಲ (Personal Loan), ಗೃಹ ಸಾಲ (Home Loan) ಅಥವಾ ವಾಹನ ಸಾಲಗಳ (Vehicle Loan) ಇಎಂಐ ಬಾಕಿಯಿದ್ದರೆ ಸಾಲಗಾರರ ಮೊಬೈಲ್ ಸಾಧನಗಳನ್ನು ನಿಷ್ಕ್ರಿಯಗೊಳಿಸುವಂತಿಲ್ಲ. ಕೇವಲ ಆ ನಿರ್ದಿಷ್ಟ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಖರೀದಿಸಲು ಪಡೆದ ಸಾಲದ ಇಎಂಐ ಬಾಕಿಯಿದ್ದಾಗ ಮಾತ್ರವೇ ಆ ಸಾಧನವನ್ನು ರಿಮೋಟ್ ಮೂಲಕ ಲಾಕ್ ಮಾಡಲು ಅವಕಾಶವಿರುತ್ತದೆ.

ಇತ್ತೀಚೆಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ, ತಂತ್ರಜ್ಞಾನದ ದುರ್ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹ್ಯಾರಾಸ್‌ಮೆಂಟ್ ಮಾಡಲಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿದೆ.


ಆರ್‌ಬಿಐ ಹೊರಡಿಸಿದ ಪ್ರಮುಖ ನಿಯಮಗಳು
ಹಂತ-ಹಂತದ ಕ್ರಮ: ಫೋನ್ ಖರೀದಿಗೆ ಪಡೆದ ಸಾಲದ ಇಎಂಐ ಬಾಕಿಯಿದ್ದರೂ ಸಹ, ಬ್ಯಾಂಕ್‌ಗಳು ತಕ್ಷಣವೇ ಫೋನ್ ಸೇವೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸುವಂತಿಲ್ಲ. ಬದಲಿಗೆ ಹಂತ-ಹಂತವಾಗಿ ನಿಯಂತ್ರಣ ಹೇರಬೇಕು.
ಅಗತ್ಯ ಸೇವೆಗಳಿಗೆ ತಡೆ ಇಲ್ಲ: ಸಾಧನವನ್ನು ಭಾಗಶಃ ಲಾಕ್ ಮಾಡಿದರೂ ಸಹ ಇನ್ ಕಮಿಂಗ್ ಕರೆಗಳು (Incoming Calls), ಎಸ್ಎಂಎಸ್ (SMS) ಹಾಗೂ ತುರ್ತು ಸೇವೆಗಳಾದ ‘SOS’ ಸೌಲಭ್ಯಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ.
ಸರ್ಟಿಫೈಡ್ ಟೆಕ್ನಾಲಜಿ ಬಳಕೆ: ಬ್ಯಾಂಕ್‌ಗಳು ಅಥವಾ ಸಾಲ ನೀಡುವ ಸಂಸ್ಥೆಗಳು ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅಥವಾ ಉತ್ಪಾದಕ ಸಂಸ್ಥೆಗಳಿಂದ (OEM) ಪ್ರಮಾಣೀಕರಿಸಲ್ಪಟ್ಟ (Certified) ತಂತ್ರಜ್ಞಾನವನ್ನು ಮಾತ್ರ ಸಾಧನಗಳನ್ನು ಲಾಕ್ ಮಾಡಲು ಬಳಸಬೇಕು.
ಗ್ರಾಹಕರ ಗೌಪ್ಯತೆ ರಕ್ಷಣೆ: ವಸೂಲಾತಿ ಏಜೆಂಟ್‌ಗಳು ಅಥವಾ ಸಿಬ್ಬಂದಿ ಜೊತೆ ಹಂಚಿಕೊಳ್ಳುವ ಸಾಲಗಾರರ ಮಾಹಿತಿಯು ಕೇವಲ ವಸೂಲಾತಿಗೆ ಅಗತ್ಯವಿರುವಷ್ಟಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.










