ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 07 : ಸಾರ್ವಜನಿಕ ರಂಗದಲ್ಲಿರುವ ಹೋರಾಟಗಾರರಿಗೆ ಕೆಲವೊಮ್ಮೆ ಟೀಕೆ, ಅಪವಾದ ತೊಂದರೆಗಳು ಎದುರಾದರೂ ಎದೆಗುಂದಬಾರದೆಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರಥಮ ಬಾರಿಗೆ ಬುಧವಾರ ನಗರಕ್ಕೆ ಆಗಮಿಸಿದ ಟಿ.ರಘುಮೂರ್ತಿರವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಕರುನಾಡ ವಿಜಯಸೇನೆಯ ಕೆ.ಟಿ.ಶಿವಕುಮಾರ್ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸತತವಾಗಿ ಮೂರು ಬಾರಿ ಶಾಸಕನಾಗಿ ಚಳ್ಳಕೆರೆ ಅಭಿವೃದ್ದಿಪಡಿಸಿರುವುದನ್ನು ಗುರುತಿಸಿ ಕಾಂಗ್ರೆಸ್ ನಾಯಕರುಗಳು ನನಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಇದೊಂದು ಅಧಿಕಾರವಲ್ಲ. ಜವಾಬ್ದಾರಿ ಅಂದುಕೊಂಡಿದ್ದೇನೆ. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಸಹಕಾರಿಯಾಗಿ ಸರ್ಕಾರದಿಂದ ಸಿಗಬೇಕಾದ ಸೌಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರ ಸಿಕ್ಕ ಪರಿಣಾಮ ಚಳ್ಳಕೆರೆಯಲ್ಲಿ ರಸ್ತೆ ಅಗಲೀಕರಣಕ್ಕೆ ಆಸ್ಪದವಾಯಿತು. ಅದರಂತೆ ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿಯೂ ರಸ್ತೆ ಅಗಲೀಕರಣ ಮಾಡಬೇಕಾದರೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದ ಸಚಿವ ಟಿ.ರಘುಮೂರ್ತಿ ರೈತರು, ಬಡವರು, ಕೂಲಿ ಕಾರ್ಮಿಕರ ರಕ್ಷಣೆ ಜೊತೆ ಜಿಲ್ಲೆಯ ಅಭಿವೃದ್ದಿಗೆ ಆದ್ಯತೆ ಕೊಡುತ್ತೇನೆ. ಎರಡು ವರ್ಷಗಳ ಅಧಿಕಾರವಧಿಯಲ್ಲಿ ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತೇನೆಂದು ಹೇಳಲು ಆಗಲ್ಲ. ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ, ದುರ್ಗೋತ್ಸವ, ಜ್ಞಾನ ಗಂಗೋತ್ರಿಯಲ್ಲಿ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆಯನ್ನು ಹೈಟೆಕ್ಗೊಳಿಸುವುದು, ಚಂದ್ರವಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ರಾಜಾವೀರ ಮದಕರಿನಾಯಕನ ಹೆಸರಿಡುವುದು ಹೋರಾಟಗಾರ ಎಂ.ಜಯಣ್ಣ ಸ್ಮಾರಕಕ್ಕೆ ಒಂದು ಕೋಟಿ ರೂ.ಗಳ ಹಣ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಚಿವ
ಟಿ.ರಘುಮೂರ್ತಿರವರಿಗೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಅರ್ಪಿಸಿದರು.
ಮನವಿ ಆಲಿಸಿದ ಸಚಿವ ಟಿ.ರಘುಮೂರ್ತಿರವರು ನನ್ನ ಅಧಿಕಾರವಧಿಯಲ್ಲಿ ಭದ್ರಾ ಮಲ್ದಂಡೆ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ನೇರ್ಲಗುಂಟೆ ರಾಮಪ್ಪ, ಚಳ್ಳಕೆರೆಯ ಸುಹಾಸ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಚಳ್ಳಕೆರೆಯ ಪಾಂಡು, ವಿಠಲ, ರಾಕೇಶ್, ಹರೀಶ್, ಶಿವಣ್ಣ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.












