ಚಿತ್ರದುರ್ಗ.ಅ.01: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ, ಮತದಾರರ ಪಟ್ಟಿಯ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್ಗಳ ಪೈಕಿ ಶೇ.99 ರಷ್ಟು ನೋಟಿಸ್ಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 68,750 ನೋಟಿಸ್ಗಳು ಸೃಜನೆಯಗಿದ್ದು, ಸಂಬಂಧ ಪಟ್ಟ ಎಲ್ಲ ಮತದಾರರಿಗೂ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ಗಳ ವಿಚಾರಣೆಗಾಗಿ ಚುನಾವಣಾ ಆಯೋಗದಿಂದ 102 ಹೆಚ್ಚುವರಿ ಮತದಾರರ ನೋಂದಣಾಧಿಕಾರಿಗಳ ನೇಮಕ ಮಾಡಲಾಗಿದೆ. ಈ ಪೈಕಿ 66,689 ನೋಟಿಸ್ಗಳ ವಿಚಾರಣೆ ಪೂರ್ಣಗೊಂಡಿದೆ. ಖಾಯಂ ಆಗಿ ಬೇರೆಡೆಗೆ ಸ್ಥಳಾಂತರಗೊAಡವರು ಅಥವಾ ಮೃತಪಟ್ಟವರನ್ನು ಮಾತ್ರ ಪರಿಶೀಲನೆ ಬಳಿಕ ಅನರ್ಹರೆಂದು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಆಧಾರದಲ್ಲಿ ಇದುವರೆಗೂ ಒಟ್ಟು 626 ಮತದಾರರು ಅನರ್ಹಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ಮಾಹಿತಿ ನೀಡಿದರು.

ಫಾರಂ-6 ಅಡಿಯಲ್ಲಿ 16,656, ಫಾರಂ-6ಎ ಅಡಿ 9, ಫಾರಂ-7 ಅಡಿ 2,638, ಫಾರಂ-8 ಅಡಿ 20,387 ಸೇರಿ ಒಟ್ಟು 39,691 ನೂಮೂನೆಗಳು ಸ್ವೀಕೃತವಾಗಿವೆ. ಬಿ.ಎಲ್.ಎ ಹಾಗೂ ಸಾರ್ವಜನಿಕರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಫಾರಂ-7 ಅಡಿ ವಿಚಾರಣೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದವರಿಗೂ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಸೂಚಿಸಲಾದ ವ್ಯಕ್ತಿಗೂ ನೋಟಿಸ್ ನೀಡಿ, ಸರಿಯಾದ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಫಾರಂ-7 ಮೂಲಕ ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವವರ ವಿರುದ್ಧ, ಕಾನೂನುಬಾಹಿರ ಕೃತ್ಯವೆಂದು ಪರಿಗಣಿಸಿ ಎಫ್ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ಎಚ್ಚರಿಕೆ ನೀಡಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: 33 ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ
ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದ್ದು, ಅಕ್ಟೋಬರ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ 7 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 23 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 33 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 22 ಮತಗಟ್ಟೆಗಳು ಇದ್ದವು. ಹೆಚ್ಚುವರಿಯಾಗಿ 33 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಪದವಿಧರ ಕ್ಷೇತ್ರದ ಮತಪಟ್ಟಿ ಪರಿಷ್ಕರಣೆ ವೇಳೆ, ಹೊಸದಾಗಿ ಮತಪಟ್ಟಿಗೆ ಹೆಸರು ಸೇರಿಸಲು ಒಟ್ಟು 2,418 ಜನರು ಅರ್ಜಿಸಲ್ಲಿಸಿದ್ದು, ಈ ಪೈಕಿ 2,391 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. 27 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಈ ಪೈಕಿ 26 ಜನರ ಅರ್ಜಿ ಎರೆಡು ಕಡೆ ಹೆಸರಿರುವ ಕಾರಣ ತಿರಸ್ಕೃತಗೊಂಡಿದ್ದರೆ, ಒಂದು ಅರ್ಜಿ ಪದವಿ ಮುಗಿದು 3 ವರ್ಷ ಪೂರ್ಣಗೊಳ್ಳದ ಕಾರಣಕ್ಕಾಗಿ ತಿರಸ್ಕೃತಗೊಂಡಿದೆ. ಪದವಿಧರ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಜಿಲ್ಲೆಯಲ್ಲಿ 24,031 ಪುರುಷ ಮತದಾರರು ಹಾಗೂ 17,327 ಮಹಿಳಾ ಮತದಾರರು ಸೇರಿ ಒಟ್ಟು 41,358 ಮತದಾರರಿದ್ದಾರೆ. ಅಕ್ಟೋಬರ್ 27 ರಂದು ಮತ ಎಣಿಕೆ ನಡೆಯಲಿದ್ದು, ಅಕ್ಟೋಬರ್ 31ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಚುನಾವಣೆ ತಹಶೀಲ್ದಾರ್ ಫಾತೀಮಾ ಬೇಬಿ ಉಪಸ್ಥಿತರಿದ್ದರು.










